ಭಾರತೀಯ ಸಾಹಿತ್ಯ

ಭಾರತದ ಭಾಷೆಗಳು ಹಲವಾದರೂ ಸಾಹಿತ್ಯಗಳು ವೈವಿಧ್ಯಮಯವಾದರೂ ಅನೇಕ ವೈಶಿಷ್ಟಗಳಿಂದ ಕೂಡಿದವಾದರೂ ಇವೆಲ್ಲವೂ ಸಮಾನವಾದ ಹಲವು ಗುಣಧರ್ಮಗಳಿಗೆ ಮತ್ತು ಕೆಲವು ಸೂತ್ರಗಳಿಗೆ ಒಳಪಟ್ಟು ಹೆಚ್ಚು ಕಡಿಮೆ ಒಂದೇ ಬಗೆಯ ಪ್ರಭಾವಗಳಿಗೆ ಒಳಗಾಗಿವೆ. ಸಾಮಾಜಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಪ್ರಭಾವಗಳಿಂದಾಗಿ ಇವುಗಳಲ್ಲಿ ಕೆಲವು ಸಮಾನ ಗುಣಧರ್ಮಗಳಿವೆ. ಈ ನಾನಾ ಭಾಷೆಗಳ ಹಾಗೂ ಸಾಹಿತ್ಯಗಳ ಹುಟ್ಟು, ಬೆಳೆವಣಿಗೆ, ಮನೋಧರ್ಮಗಳು ಬೇರೆಬೇರೆಯಾದರೂ ಇವುಗಳಲ್ಲಿ ಮೂಲಭೂತವಾಗಿ ಏಕತೆ ಕಂಡು ಬರುತ್ತದೆ. ರಾಧಾಕೃಷ್ಣನ್ ಅವರು ಹೇಳಿರುವಂತೆ ಭಾರತದ ಭಾಷೆಗಳು ಹಲವಾದರೂ ಭಾರತೀಯರ ಸಾಹಿತ್ಯ ಒಂದೇ.

	ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ ಉಲ್ಲೇಖಗೊಂಡಿರುವ ಭಾಷೆಗಳು ಹದಿನೈದು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಒಪ್ಪಿರುವ ಭಾಷೆಗಳು ಏಳು. ಇವಲ್ಲದೆ 1600ಕ್ಕೂ ಹೆಚ್ಚು ತಾಯಿ ನುಡಿಗಳು ಭಾರತದಲ್ಲಿವೆ. ಇವುಗಳ ಪೈಕಿ ಹಲವಕ್ಕೆ ಲಿಪಿಗಳಾಗಲಿ, ವಿಪುಲ ಶಬ್ದ ಸಂಪತ್ತಿಯಗಲಿ, ದೀರ್ಘ ಸಾಹಿತ್ಯದ ಇತಿಹಾಸಗಳಾಗಲೀ ಇಲ್ಲ. ಆದರೆ ಇವೆಲ್ಲವನ್ನೂ ಹೊಂದಿ ಪರಿಪುಷ್ಪವಾಗಿ ಬೆಳೆದಿರುವ ಭಾಷಾ ಸಾಹಿತ್ಯಗಳು ಕಡಿಮೆಯೇನಲ್ಲ. ಉತ್ತರ ಮತ್ತು ವಾಯುವ್ಯ ಭಾಗಳಲ್ಲಿ ಪ್ರಚಾರದಲ್ಲಿರುವ ಹಿಂದಿ, ಕಾಶ್ಮೀರಿ, ಪಂಜಾಬಿ, ಉರ್ದು ಪೂರ್ವದ ರಾಜ್ಯಗಳ ಒರಿಯ, ಬಂಗಾಳೀ, ಅಸ್ಸಾಮಿ; ಪಶ್ಚಿಮ ಭಾರತದ ಗುಜರಾತಿ, ಮರಾಠೀ, ಸಿಂಧಿ; ದಕ್ಷಿಣದ ತಮಿಳು, ಕನ್ನಡ, ತೆಲುಗು, ಮತ್ತು ಮಲಯಾಳಮ್; ಇವಲ್ಲದೆ ಡೋಗ್ರೀ, ಕೊಂಕಣಿ, ತುಳು, ಮೈಥಿಲಿ-ಇವೆಲ್ಲ ಭಾಷೆ ಹಾಗೂ ಸಾಹಿತ್ಯ ದೃಷ್ಟಿಯಿಂದ ಬಹಳ ಮಹತ್ತ್ವವಾದವು. ಅನೇಕ ಆಧುನಿಕ ಭಾರತೀಯ ಭಾಷೆಗಳ ತಾಯಿ ಬೇರೆನಿಸಿದ, ಇಂದಿಗೂ ಅವುಗಳ ಮೇಲೆ ಪ್ರಭಾವ ಬೀರುತ್ತಿರುವ ಪ್ರಾಚೀನವೂ ಸಮೃದ್ಧವೂ ವೈವಿಧ್ಯಮಯವೂ ಅದ ಸಾಹಿತ್ಯದಿಂದ ಕೂಡಿದ. ಒಂದು ಕಾಲದಲ್ಲಿ ಇಡೀ ಭಾರತದ ಜ್ಞಾನವಿಜ್ಞಾನ ಮಿದ್ವತ್ ಭಾಷೆ ಎನಿಸಿದ್ದ, ಇಂದಿಗೂ ಭಾರತೀಯ ಭಾಷೆಗಳಿಗೆಲ್ಲ ಅವುಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸುವ ಶಬ್ದ ಸಂಪತ್ತಿಯನ್ನೊದಗಿಸುತ್ತಿರುವ ಸಂಸ್ಕøತದ ಮಹತ್ತ್ವವೂ ಮರೆಯಲಾಗದಂಥದು. ಆಧುನಿಕ ಭಾರತೀಯ ಭಾಷೆಗಳ ಸಾಹಿತ್ಯವನ್ನೆಲ್ಲ ಒಟ್ಟಿಗೆ ರಾಶಿ ಹಾಕಿದರೆ ಇಡೀ ಯೂರೋಪಿನ ಎಲ್ಲ ಭಾಷೆಗಳ ಒಟ್ಟು ಸಾಹಿತ್ಯದಷ್ಟೇ ಆಗುವುದೆಂದೂ ವೈದಿಕ ಸಂಸ್ಕøತ, ಸಂಸ್ಕøತ ಪಾಳಿ, ಪ್ರೌಕೃತಗಳು, ಅಪಭ್ರಂಶ ಇವೆಲ್ಲವನ್ನೂ ಸೇರಿಸಿದರೆ ಭಾರತದ ಸಾಹಿತ್ಯ ರಾಶಿ ಊಹಾತೀತವೆಂದು ನಗೇಂದ್ರ ಹೇಳಿದ್ದಾರೆ.

	ಭಾರತೀಯ ಸಾಹಿತ್ಯ ಕನಿಷ್ಕ ಮೂರು ಸಾವಿರ ವರ್ಷಗಳಷ್ಟು ಹಳೆಯದು. ಹರಪ್ಪ, ಮೊಹೆಂಜೊದಾರೋಗಳಲ್ಲಿ ದೊರಕಿರುವ ಮುದ್ರೆಗಳ ಲಿಪಿಗಳನ್ನು ಸಮರ್ಪಕವಾಗಿ ಓದುವುದು ಸಾಧ್ಯವಾದರೆ ಭಾರತದ ಭಾಷೆ ಸಾಹಿತ್ಯಗಳ ಇತಿಹಾಸವನ್ನು ಇನ್ನೂ ಒಂದೆರಡು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯ ಬಹುದು. ಈ ದೀರ್ಘಕಾಲದಲ್ಲಿ ಇವು ಅನೇಕ ಪರಿವರ್ತನೆಗೆ ಒಳಗಾಗಿವೆ. ಹಲವು ಕವಲುಗಳಾಗಿ ಒಡೆದಿವೆ. ಒಮ್ಮೆ ಜನರು ಆಡುತ್ತಿದ್ದ ಭಾಷೆಗಳು ಈಗ ಅಡುನುಡಿಗಳಾಗಿ ಉಳಿದಿಲ್ಲ. ಆದರೆ ಇವು ಸಾಹಿತ್ಯ ಕೃತಿಗಳಲ್ಲೂ ವ್ಯಾಕರಣ ಗ್ರಂಥಗಳಲ್ಲೂ ಜೀವಂತವಾಗಿ ಉಳಿದಿವೆ. ಇವು ಆಧುನಿಕ ಭಾಷೆ ಸಾಹಿತ್ಯಗಳಿಗೆ ಸ್ಛೂರ್ತಿ ಒದಗಿಸುತ್ತಿವೆ.

	ಆಧುನಿಕ ಭಾರತದ ಭಾಷೆಗಳು ಹಲವಾದರೂ ಸಾಹಿತ್ಯ ಒಂದೇ ಎಂಬ ಮಾತು ಸ್ಥೂಲ ನೋಟಕ್ಕೆ ಸರಿಯೆನಿಸಿದರೂ ಅವುಗಳ ಭಾಷಾ ಸಾಹಿತ್ಯಗಳಲ್ಲಿ ಅವುಗಳವೇ ಆದ ವೈಶಿಷ್ಟ್ಯಗಳಿಲ್ಲದೆ ಇಲ್ಲ. ನಗೇಂದ್ರ ಅವರು ಹೇಳಿರುವ ಹಾಗೆ ತಮಿಳು ಸಂಗಮ್ ಸಾಹಿತ್ಯ, ತೆಲುಗಿನ ಅವಧಾನ ಹಾಗೂ ಉದಾಹರಣ ಸಾಹಿತ್ಯ, ಮಲಯಾಳಮ್ ಭಾಷೆಯ ಮಣಿಪ್ರವಾಳ ಶೈಲಿ (ಸಂಸ್ಕøತ ಮಲಯಾಳಮ್ ಮಿಶ್ರಣ) ಹಾಗೂ ಸಂದೇಶ ಕಾವ್ಯ ಮತ್ತು ಕಿಳಿಪ್ಪಾಟ್ಟು, ಮರಾಠಿಯ ಲಾವಣಿ. ಗುಜರಾತಿಯ ಫಾಗು, ಕನ್ನಡದ ರಚನ ಹಾಗೂ ದಾಸ ಸಾಹಿತ್ಯ ಆಸ್ಸಾಮಿಯ ಬಾರ್ಗಿತ್ ಮತ್ತು ಬುರಂಜಿ, ಪಂಜಾಬಿಯ ಸಾಹಸರಮ್ಯ ಗೀತಕಾವ್ಯ, ಉರ್ದುವಿನ ಗಜಲ್, ಹಿಂದಿಯ ರೀತಿಕಾವ್ಯ ಹಾಗೂ ಛಾಯವಾದ-ಇವು ಈ ವೈಶಿಷ್ಟ್ಯಗಳಿಗೆ ಕೆಲವು ನಿದರ್ಶನಗಳು.

	ಆದಾಗ್ಯೂ ಭಾರತೀಯ ಸಾಹಿತ್ಯದ ಮೂಲಭೂತ ಅಖಂಡತೆ ಬೆರಗುಗೊಳಿಸುವಂಥದು, ವಿವಿಧತೆಯಲ್ಲಿ ಏಕತೆ ಎಂಬುದನ್ನು ಸ್ಪಷ್ಟಪಡಿಸುವಂಥದು. ಇಂದು ಆಡುವ ಭಾಷೆಯಾಗಿಲ್ಲದ ತಮಿಳು ತೆಲುಗು ಕನ್ನಡಗಳನ್ನೂ ಭಾರತದ ಈಚಿನದೆನ್ನಬಹುದಾದ ಉರ್ದುವನ್ನೂ ಬಿಟ್ಟರೆ ಉಳಿದ ಎಲ್ಲ ಆಧುನಿಕ ಭಾಷೆಗಳೂ ಸ್ಥೂಲವಾಗಿ ಒಂದೇ ಕಾಲದಲ್ಲಿ ಉಗಮಿಸಿದಂಥವು. ಇವು 11-13 ಶತಮಾನಾವಧಿಯಲ್ಲಿ ಹುಟ್ಟಿದವು. ತಮಿಳು ಸಂಸ್ಕøತದಷ್ಟೇ ಪ್ರಾಚೀನವಾದ್ದು. ಕೆಲವು ವಿದ್ವಾಂಸರ ಅಭಿಪ್ರಾಯದಲ್ಲಿ ಸಂಸ್ಕøತಕ್ಕಿಂತ ಹಿಂದಿನದು. ಉರ್ದು ಸುಮಾರು 15ನೆಯ ಶತಮಾನದಲ್ಲಿ ಹುಟ್ಟಿದ್ದು. ಈ ಭಾಷೆ ಸಾಹಿತ್ಯಗಳ ಮೊದಲನೆಯ ಘಟ್ಟ 15ನೆಯ ಶತಮಾನದ ತನಕ. ಮಧ್ಯಯುಗದ ಪ್ರಥಮಾರ್ಧ 17ನೆಯ ಶತಮಾನದ ನಡುಗಾಲದ ತನಕ ಅಂದರೆ ಮೊಗಲರ ವೈಭವದ ಕೊನೆಯ ತನಕ. ಈ ಯುಗದ ದ್ವಿತೀಯಾರ್ಧ ಭಾರತದಲ್ಲಿ ಬ್ರಿಟಿಷರ ಆಡಳಿತ ಸ್ಥಾಪನೆಯೊಂದಿಗೆ ಕೊನೆಗೊಳ್ಳುತ್ತದೆ. ಅಲ್ಲಿಂದೀಚೆಗೆ ಆಧುನಿಕ ಯುಗ.

	ಆದಿಮ ಘಟ್ಟದಲ್ಲಿ ಭಾರತಕ್ಕೆ ಬಂದ ಹಾಗೂ ಇಲ್ಲಿ ವಾಸವಾಗಿದ್ದ ಜನಾಂಗಗಳ ಭಾಷೆಗಳ ಬಗ್ಗೆ ಖಚಿತವಾಗಿ ಏನೂ ಗೊತ್ತಾಗಿಲ್ಲ. ಪ್ರಾಗಿತಿಹಾಸಕಾಲದಲ್ಲಿ ಭಾರತಕ್ಕೆ ಮೊದಲು ಬಂದ ನೀಗ್ರೊಟೊಗಳು ಭಾರತದಲ್ಲಿ ಬಹುತೇಕ ಉಳಿಯಲಿಲ್ಲ. ಆಮೇಲೆ ಇಲ್ಲಿಗೆ ಬಂದ ಜನಾಂಗಗಳು ಅವರನ್ನು ಬಹುಶಃ ಕೊಂದಿರಬೇಕು ಇಲ್ಲವೇ ವಿಲೀನಗೊಳಿಸಿಕೊಂಡಿರಬೇಕು. ಭಾರತದ ಭಾಷೆಗಳ ಮೇಲೆ ಅವರ ಪ್ರಭಾವ ಹೆಚ್ಚಿಲ್ಲ. ಆರ್ಯಭಾಷೆ ಭಾರತಕ್ಕೆ ಬರುವ ಮೊದಲೇ ಆಸ್ಟ್ರಿಕ್ ಹಾಗೂ ದ್ರಾವಿಡಭಾಷಾ ಸ್ತರಗಳು ಇವರ ಭಾಷೆಯನ್ನು ಮರೆ ಮಾಡಿರಬಹುದು. ಇಂಡೊ-ಆರ್ಯನ್ ಭಾಷೆಗಳ ಮೇಲೆ ದ್ರಾವಿಡ ಭಾಷೆಗಳಲ್ಲದೆ ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳ ಪ್ರಭಾವವೂ ಬಿದ್ದಿರಬೇಕು. ಈ ಭಾಷೆಗಳನ್ನಾಡುವವರು ಭಾರತದ ನಾಗರಿಕತೆಯ ಮೇಲೆ ಮಹತ್ತ್ವದ ಪ್ರಭಾವ ಬೀರಿದರು. ವ್ಯವಸಾಯ ಇವರಿಂದ ಬಂದಿರಬಹುದು ಎನ್ನಲಾಗಿದೆ. ಪುನರ್ಜನ್ಮದ ಭಾವನೆಯೂ ಅನೇಕ ಮತೀಯ ಆಚರಣೆಗಳೂ ಇವರ ಕೊಡುಗೆ. ಬ್ರಹ್ಮಾಂಡದ ಕಲ್ಪನೆ. ವಿಷ್ಣುವಿನ ಅವತಾರಗಳು, ಮತ್ಸ್ಯಗಂಧಿಯ ಹಾಗೂ ನಾಗರ ಕಥೆಗಳು ಇವೆಲ್ಲ ಪ್ರೋಟೊ ಆಸ್ಟ್ರಲಾಯ್ಡರಿಂದ ಬಂದವು ಎನ್ನಲಾಗಿದೆ. ಹಿಂದುಗಳ ಅನೇಕ ಪುರಾಣಗಳಿಗೆ ಇವು ಆಧಾರ. ಇವು ಒಳ್ಳೆಯ ಸಾಹಿತ್ಯ ಗುಣವುಳ್ಳವು. ಇವನ್ನು ಆಧರಿಸಿ ಭಾರತದ ನಾನಾ ಭಾಷೆಗಳಲ್ಲಿ ಸಾಹಿತ್ಯ ರಾಶಿಯೇ ಸೃಷ್ಟಿಯಾಗಿದೆ. ಇದಕ್ಕೆಲ್ಲ ಪರೋಕ್ಷವಾಗಿ ಪ್ರೊಟೊ-ಆಸ್ಟ್ರಲಾಯ್ಡರು ಕಾರಣರು ಎನ್ನಬಹುದು.

	ಪ್ರೊಟೊ-ಆಸ್ಟ್ರಲಾಯ್ಡರದು ಗ್ರಾಮೀಣ ಸಂಸ್ಕøತಿಯಾದರೆ ಮೆಡಿಟರೇನಿಯನ್ ಜನಾಂಗಕ್ಕೆ ಸೇರಿದ ಮೂರು ಶಾಖೆಗಳ ಜನರದು ನಗರ ಸಂಸ್ಕøತಿ. ಇವರು ದ್ರಾವಿಡ ಭಾಷೆ ಆಡುತ್ತಿದ್ದರೆಂದು ಉಹಿಸಲಾಗಿದೆ. ಒಳನಾಡಿನ ವ್ಯಾಪಾರ ಬೆಳೆದದ್ದೂ ಇವರಿಂದ. ದಕ್ಷಿಣ ಭಾರತಕ್ಕೆ ಬಹುತೇಕ ಸೀಮಿತವಾದ ದ್ರಾವಿಡಭಾಷೆ ಒಂದು ಕಾಲದಲ್ಲಿ ಹೆಚ್ಚಿನ ವ್ಯಾಪ್ತಿ ಪಡೆದಿತ್ತು. ಉತ್ತರ ಭಾರತದಲ್ಲಿ ಒಂದು ಕಾಲಕ್ಕೆ ದ್ರಾವಿಡ ಭಾಷೆ ಆಡುವವರು ಆಸ್ಟ್ರಿರ್ ಭಾಷಾ ಜನರೂ ಸಹಜೀವನ ನಡೆಸಿದ್ದಿರಬೇಕು. ಅಂತೂ ಆರ್ಯಭಾಷೆ ಅಡುವವರು ಭಾರತಕ್ಕೆ ಬಂದಾಗ ಇಲ್ಲಿ ಆದಿಮ ದ್ರಾವಿಡ ಭಾಷೆ ಆಡುತ್ತಿದ್ದ ಜನರಿದ್ದರು. ಎಂಬುದು ನಿರ್ವಿವಾದ. ಹಿಂದೂ ಧರ್ಮದ ಸಾಹಿತ್ಯ ಸಂಸ್ಕøತಿಗಳಲ್ಲಿ ಆರ್ಯ, ದ್ರಾವಿಡ ಎರಡೂ ಪ್ರಭಾವಗಳು ವಿಪುಲವಾಗಿವೆ. ಇವೆರಡೂ ಸಂಸ್ಕøತಿಗಳ ಸಾಮರಸ್ಯ ಫಲವನ್ನೇ ಭಾರತೀಯ ಸಾಹಿತ್ಯದಲ್ಲಿ ಉದ್ದಕ್ಕೂ ಕಾಣಬಹುದಾಗಿದೆ. ಆದರೆ ಆರ್ಯರು ಬರುವುದಕ್ಕೆ ಮುಂಚಿನ ಸಾಹಿತ್ಯ ಯಾವರೀತಿ ಬೆಳೆಯಿತು. ಆಗಿನ ಭಾಷೆಯ ಸ್ವರೂಪವೇನು, ಲಿಪಿಗಳ ವೈಶಿಷ್ಟ್ಯಗಳೇನು ಎಂಬ ಬಗ್ಗೆ ಖಚಿತವಾಗಿ ಹೇಳುವುದು ಮಾತ್ರ ಇಲ್ಲಿಯ ತನಕವೂ ಸಾಧ್ಯವಾಗಿಲ್ಲ.

	ಪ್ರಾಚೀನಯುಗ: ಭಾರತೀಯ ಸಾಹಿತ್ಯದ ಇತಿಹಾಸವನ್ನು ವೇದಗಳಿಂದಲೇ ಆರಂಭಿಸಬೇಕು. ಆರ್ಯಭಾಷೆಯನ್ನಾಡುವ ಜನರು ಹಿಮಾಲಯದ ಮಹೋನ್ನತ ಶಿಖರಗಳ ನಡುವೆ ಸಾಗಿ ಭಾರತಕ್ಕೆ ಬಂದಾಗ ಅವರ ಮೇಲೆ ಆದ ಅಗಾಧ ಪ್ರಭಾವದ ಫಲವೆಂದರೆ ವೇದಗಳು. ಓದು ಬರೆಹ ತಿಳಿಯದ ಆ ಅಲೆಮಾರಿ ಜನರು ಓಜಸ್ವೀ ಗಾಯಕರೂ ಚತುರರಾಜನೀತಿಜ್ಞರೂ ತತ್ತ್ವಜಿಜ್ಞಾಸುಗಳೂ ಆಗಿ ಪರಿಣಮಿಸಿದರು. ವೈದಿಕ ಸಾಹಿತ್ಯ ಋಕ್, ಸಾಮ, ಯಜುರ್, ಅಥರ್ವ ಎಂದು ನಾಲ್ಕು ಭಾಗಗಳಲ್ಲಿದೆ. ಆತ್ಯಂತ ಪ್ರಾಚೀನ ಎನಿಸಿದ ಋಗ್ವೇದದ ಭಾಷೆ ಕ್ರಿ. ಪೂ. ಸು. 1000 ಎಂದು ಹೇಳಲಾಗಿದೆ. ಆದರೆ ಇಡೀ ಋಗ್ವೇದವನ್ನು ಈ ಕಾಲಕ್ಕೆ ನಿರ್ದೇಶಿಸಲಾಗದು. ಇದಕ್ಕೆ ಹಿಂದಿನ ಹಾಗೂ ಈಚೆಗಿನ ಭಾಗಗಳೂ ಇದರಲ್ಲುಂಟು. ಋಗ್ವೇದವನ್ನು ಜನಪದ ಕಾವ್ಯವೆಂದು ಕೆಲವರು ಭಾವಿಸುವುದುಂಟು. ಆದರೆ ಇದು ಸರಿಯಾದ ಭಾವನೆಯಲ್ಲ. ಅಲ್ಲಲ್ಲಿ ನಾಡ ಹಾಡುಗಳ, ವೀರಗೀತೆಗಳ, ಭಾವಗೀತೆಗಳ ಸೌಂದರ್ಯ ಮಿಂಚಿದರೂ ಇವು ಇಂಡೊ-ಇರಾನಿಯನ್ ಕಾಲದಿಂದ ಹರಿದುಬಂದ ಸ್ತೋತ್ರಪಾಠಗಳ ರಾಶಿ. ಕೆಲವೇ ಪುರೋಹಿತ ಮತೆತನಗಳ ಏಕಸ್ವಾಮ್ಯದ ಬೀಗಮುದ್ರೆಯಲ್ಲಿ ಇದು ಉಳಿಯಿತು. ಋಗ್ವೇದದಲ್ಲಿ ಇತಿಹಾಸದ ಹೆಜ್ಜೆಯನ್ನು ಗುರುತಿಸಲಾಗಿಲ್ಲ. ಆದರೆ ಇದು ನಮಗೆ ತಿಳಿದಂತೆ ಅತ್ಯಂತ ಪ್ರಾಚೀನ ಇಂಡೊ-ಆರ್ಯನ್ ಭಾಷೆ. ವಾಂಶಿಕವಾಗಿ ಹರಿದು ಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ಪ್ರತ್ಯೇಕವಾಗಿದ್ದು ಕೃತಕವೆನಿಸುವುದು. ಆದ್ದರಿಂದ ಅನಂತರದ ಅಭಿಜಾತ ಸಂಸ್ಕøತ ಸಾಹಿತ್ಯದ ಭಾಷೆಯಂತೆ ವಿಶೇಷ ಧ್ವನಿಯುಕ್ತವಲ್ಲ. ಋಗ್ವೇದದ ಅನಂತರ ಭಾಷೆ ಸ್ವಲ್ಪ ಮಟ್ಟಿಗೆ ಬದಲಾಗಿರುವುದನ್ನು ಕಾಣಬಹುದು.

	ಸಂಹಿತೆಗಳ ಅನಂತರ ಬಂದ ಕೃತಿಗಳು ಬ್ರಾಹ್ಮಣಗಳು. ಇವು ಸಂಹಿತೆಗಳ ಮುಂದುವರಿದ ಭಾಗವಾದರೂ ಅವುಗಳಿಂದ ಭಿನ್ನವಾದವು. ಬಹುತೇಕ ಗದ್ಯದಲ್ಲಿವೆ. ಶೈಲಿ ಅಷ್ಟೇನೂ ಸುಂದರವಲ್ಲ. ಇವುಗಳದು ಪ್ರಾಚೀನ ಇಂಡೊ-ಯೂರೊಪಿಯನ್ ಭಾಷೆಯ ಗದ್ಯ. ಯಜ್ಞಯಾಗಾದಿಗಳ ದೀರ್ಘ ವಿವೇಚನೆ ಇವುಗಳಲ್ಲಿದೆ. ಹಿಂದೂ ಸಮಾಜದ ಜಾತಿ ಉಪಜಾತಿಗಳ ಕಲ್ಪನೆ ಇಲ್ಲಿ ಮೊಳೆಯತೊಡಗಿತು. ಅನಂತರ ಬಂದವು ಆರಣ್ಯಕಗಳು. ಆಮೇಲೆ ಉಪನಿಷತ್ತುಗಳು. ಇವು ವೈದಿಕ ಯುಗದ ಕೊನೆಯ ಘಟ್ಟವನ್ನು ಸೂಚಿಸುತ್ತವೆ. ವೇದಗಳು ಯಜ್ಞಕ್ಕೆ ಪ್ರಾಧಾನ್ಯ ನೀಡಿದರೆ ಉಪನಿಷತ್ತುಗಳು ಚಿಂತನೆಗೆ, ಜ್ಞಾನಕ್ಕೆ ಪ್ರಾಶಸ್ತ್ಯ ನೀಡುತ್ತವೆ. ಮುಂದಿನ ಎರಡೂವರೆ ಸಾವಿರ ವರ್ಷಗಳ ಕಾಲ ಹಿಂದೂಧರ್ಮವೂ ಭಾರತೀಯ ಸಾಹಿತ್ಯವೂ ಉಪನಿಷತ್ತುಗಳ ಪ್ರಭಾವಕ್ಕೆ ಒಳಗಾದುವು.

	ಕ್ರಿ. ಪೂ. 500ರ ಸುಮಾರಿಗೆ ವೈದಿಕಯುಗ ಮುಗಿಯಿತು. ಈ ವೇಳೆಗೆ ಪ್ರಾಚೀನ ಇಂಡೊ-ಆರ್ಯನ್ ಭಾಷೆಯ ವಿಕಾಸ ಅಂತಿಮ ಘಟ್ಟ ಮುಟ್ಟಿತ್ತು. ಇದೇ ಕಾಲದಲ್ಲಿ ವೈಯಾಕರಣರಿಂದ ನಿರ್ಬಂಧಿತವಾದ ರೂಪದಲ್ಲೇ ಸಂಸ್ಕøತ ಮುಂದಿನ ಎರಡೂವರೆ ಸಹಸ್ರಮಾನಗಳಿಗಿಂತ ಹೆಚ್ಚಿನ ಕಾಲದಲ್ಲಿ ಮುಂದುವರಿದಿದ. ಕ್ರಿ. ಪೂ. 500ರ ಅನಂತರ ಬಂದ ಮುಖ್ಯ ಕೃತಿಗಳು ಸೂತ್ರಗಳು. ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯವಾಗುವಂತೆ ಸೂತ್ರರೂಪದ ಸಣ್ಣ ವಾಕ್ಯಗಳಲ್ಲಿ ರಚಿಸಿದ ಕೃತಿಗಳು ಇವು. ಸೂತ್ರಸಾಹಿತ್ಯ ವೈದಿಕ ಸಾಹಿತ್ಯದ ಭಾಗವಲ್ಲವಾದರೂ ಅದಕ್ಕೆ ನಿಕಟ ಸಂಬಂಧ ಹೊಂದಿರುವಂಥದ್ದು. ಆದ್ದರಿಂದ ಇದಕ್ಕೆ ವೇದಾಂಗ ಎಂಬ ಹೆಸರು ಬಂದಿದೆ. ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ. ಛಂದಸ್ಸು, ಜ್ಯೋತಿಷ ಇವೆಲ್ಲ ಇದರಲ್ಲಿ ಸೇರಿವೆ. ಇದರಲ್ಲಿ ಅತ್ಯಂತ ಗಮನಾರ್ಹವಾದ್ದೆಂದರೆ ಭಾಷಾಶಾಸ್ತ್ರವನ್ನು ಕುರಿತ ವಿವೇಚನೆ. ಕ್ರಿ.ಪೂ. 6-5ನೆಯ ಶತಮಾನಗಳ ನಡುವೆ ರಚಿತವಾದ, ಪಾಣನಿಯ ಅಷ್ಟಾಧ್ಯಾಯಿ ಸುಸಂಸ್ಕøತರು ಎನಿಸಿಕೊಂಡವರು ಆಡುತ್ತಿದ್ದ ಭಾಷೆಯ ವ್ಯಾಕರಣಗಳ ಸೂತ್ರಗಳ ವಿವೇಚನೆ. ಇದಕ್ಕೆ ಪುರವಣಿಯಾಗಿ ಬಂದದ್ದು ಕಾತ್ಯಾಯನನ ವಾರ್ತಿಕೆ. ಇವೆರಡರ ಆಧಾರದ ಮೇಲೆ ಸಮಗ್ರವಾದ ಮಹಾಭಾಷ್ಯ ಬರೆದವ ಪತಂಜಲಿ. ವೈಯಾಕರಣ ತ್ರಿಮೂರ್ತಿಗಳಲ್ಲಿ ಈತ ಕೊನೆಯವ. ಜನಸಾಮಾನ್ಯರ ಆಸಕ್ತಿ ಸಂಸ್ಕøತದಲ್ಲಿ ಕಡಿಮೆಯಾಗುತ್ತಿದ್ದಾಗ ಸಂಸ್ಕøತ ಭಾಷೆ ತನ್ನ ಶುದ್ಧತೆ ಕಳೆದುಕೊಳ್ಳುತ್ತಿದೆ ಎನಿಸಿದಾಗ, ಬ್ರಾಹ್ಮಣ ವಿದ್ವಾಂಸರಿಗಾಗಿ ಇವನು ಈ ಕೃತಿ ಬರೆದ. ಇದರಲ್ಲಿ ಆ ಕಾಲದ ಭಾರತ ಚಿತ್ರವೂ ಇದೆ.

	ವೇದಗಳ ಅನಂತರದ ಕಾಲದಲಿ ಭಾರತೀಯ ಸಾಹಿತ್ಯ ಚಟುವಟಿಕೆ ಹಲವು ದಿಕ್ಕುಗಳಲ್ಲಿ ಹರಿಯಿತು. ಇದು ಉತ್ತರಭಾರತಕ್ಕೆ ಸೀಮಿತವಾಗಿದ್ದೇನು ಅಲ್ಲ. ದಕ್ಷಿಣದಲ್ಲೂ ಸಮೃದ್ಧವಾಗಿ ಬೆಳೆದಿತ್ತು. ದ್ರಾವಿಡ ಭಾಷೆಗಳ ಸಾಹಿತ್ಯದ ಸೊಂಪು ಸಮೃದ್ಧಿಯಾಗಿತ್ತು. ತಮಿಳು ಭಾಷೆ ಸಾಹಿತ್ಯ ಇತರ ದ್ರಾವಿಡ ಭಾಷೆ ಸಾಹಿತ್ಯಗಳಿಗಿಂತ ಹಳೆಯದು. ಆದರೆ ಎಷ್ಟು ಹಳೆಯದೆಂಬುದರ ಬಗ್ಗೆ ಏಕಾಭಿಪ್ರಾಯವಿಲ್ಲ. ತಮಿಳು ಸಾಹಿತ್ಯ ಕನಿಷ್ಠ ಎಂಟು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳುವವರಿದ್ದಾರೆ. ತಮಿಳು ಸಂಘಗಳ ಸಾಹಿತ್ಯದ ಕಾಲ ಕ್ರಿ. ಪೂ. 5ನೆಯ ಶತಮಾನದಿಂದ ಕ್ರಿ. ಶ. 5ನೆಯ ಶತಮಾನದವರೆಗಿನದು ಎಂದು ಕೆಲವು ವಿದ್ವಾಂಸರ ಭಾವನೆ. ಪನ್ನೀರು ಪಡಲಮ್ ಎಂಬುದು ಅಗಸ್ತ್ಯರ ಶಿಷ್ಯರು ರಚಿಸಿದ ಗ್ರಂಥ ಎಂದು ನಂಬಲಾಗಿದೆ. ಇದರಲಿ ತೊಲ್‍ಕಾಪ್ಪಿಯಮ್ ಎಂಬ ಅಧ್ಯಾಯ ಮಾತ್ರ ಉಳಿದಿದೆ. ಇದು ಒಂದು ವ್ಯಾಕರಣ ಕೃತಿ. ತಮಿಳು ಪ್ರಾಚೀನ ಗ್ರಂಥಗಳ ಪೈಕಿ ಸಿಕ್ಕಿರುವವು ಸಾಮಾನ್ಯವಾಗಿ ಮೂರನೆಯ ಸಂಘಕ್ಕೆ ಸೇರಿದವು ಎನ್ನಲಾಗಿದೆ. ಇವು ಕ್ರಿ. ಶ. 2-3ನೆಯ ಶತಮಾನಗಳಿಗೆ ಸೇರಿದವು. ಇವು ಲಘುಗೀತೆಗಳ ದೀರ್ಘಕವನಗಳ ಸಂಕಲನಗಳು. ಇವುಗಳ ಪೈಕಿ ತಿರುಕ್ಕು¾ಳ್ ಅತ್ಯಂತ ಪ್ರಸಿದ್ಧವಾದ್ದು. ತಮಿಳು ವೇದವೆಂದು ಪ್ರಸಿದ್ದವಾಗಿದೆ. ಕ್ರಿ. ಶ. 100ರಿಂದ 600ರ ತನಕದ ಕಾಲದಲ್ಲಿ ರಚಿತವಾದ ಕೃತಿಗಳ ಪೈಕಿ ಇಳಂಗೋವಡಿಗಳ್ ಶಿಲಪ್ಪದಿಕಾರಮ್, ಶೀತ್ತಲೈಚ್ಚಾತ್ತನಾರನ ಮಣಿಮೇಖಲೈ ಇವು ಪ್ರಸಿದ್ದ.

	ವೇದಗಳ ಅನಂತರದ ಕಾಲದಲ್ಲಿ ಉತ್ತರ ಭಾರತದಲ್ಲಿ ಸಂಸ್ಕøತಭಾಷೆ ಅನೇಕ ಪ್ರಾಕೃತರೂಪಗಳಿಗೆ ಎಡೆಕೊಟ್ಟಿತು. ಬುದ್ಧನ ಪರಿನಿರ್ವಾಣವಾದ ಮೇಲೆ ಬೌದ್ಧಸಾಹಿತ್ಯ ಮುಖ್ಯವಾಗಿ ಪಾಲಿ ಭಾಷೆಯಲ್ಲಿ ಬೆಳೆಯಿತು. ತ್ರಿಪಿಟಕಗಳಲ್ಲಿ ಪಾಲಿ ಸಾಹಿತ್ಯದ ಉತ್ತಮಾಂಶವಿದೆ. ಮುಖ್ಯವಾದ ಪ್ರಾಕೃತ ಭಾಷೆಗಳು ಮಹಾರಾಷ್ಟ್ರೀ, ಶೌರಸೇನಿ, ಮಾಗಧೀ, ಪೈಶಾಚೀ ಮತ್ತು ಅಪಭ್ರಂಶ. ಜೈನಾಗಮಗಳು ಅರ್ಧಮಾಗಧಿಯಲ್ಲಿವೆ. ಪ್ರಾಕೃತಗಳು ಆ ಕಾಲದ ಜನರು ಆಡುತ್ತಿದ್ದ ಭಾಷೆಗಳಾದ್ದರಿಂದ ಬೌದ್ಧಜೈನ ಸಾಹಿತ್ಯ ಈ ಭಾಷೆಗಳಲ್ಲಿ ಬೆಳೆದದ್ದು ಸಹಜವೇ ಆಗಿದೆ.

	ವೈದಿಕ ಧರ್ಮಕ್ಕೆ ಸಂಬಂಧಿಸಿದಂತೆ ಅತ್ಯಂತ ಮುಖ್ಯ ಕೃತಿಗಳು ರಾಮಾಯಣ, ಭಾರತ, ಧರ್ಮಶಾಸ್ತ್ರಗಳು ಅಥವಾ ಸ್ಮøತಿಗಳು. ಇವು ಸಂಪೂರ್ಣ ಧಾರ್ಮಿಕವೂ ಅಲ್ಲ. ಪೂರ್ತಿಯಾಗಿ ಲೌಕಿಕವೂ ಅಲ್ಲ. ಇವಲ್ಲದೆ ಅನೇಕ ಪುರಾಣಗಳೂ, ತಂತ್ರಗಳೂ ಹುಟ್ಟಿದವು. ಜೊತೆಗೆ ಧಾರ್ಮಿಕ ಸಾಹಿತ್ಯ ಕೂಡ ಬೆಳೆಯಿತು. ಲೌಕಿಕ ಸಾಹಿತ್ಯದಲ್ಲಿ ಪ್ರಮುಖವಾದವು. ನಾಟಕಗಳು ಹಾಗೂ ಕಾವ್ಯಗಳು ಅಲ್ಲದೆ ವ್ಯಾಕರಣಗ್ರಂಥಗಳೂ ನ್ಯಾಯ, ರಾಜ್ಯಶಾಸ್ತ್ರ, ವೈದ್ಯ ಮುಂತಾದ ವಿಷಯಗಳ ಕೃತಿಗಳೂ ಸೃಷ್ಟಿಯಾದುವು. ರಾಮಾಯಣ ಭಾರತಗಳು ಸುಮಾರು ಎರಡು ಸಾವಿರ ವರ್ಷಗಳ ಸಾಹಿತ್ಯಕ್ಕೆ ವಿಶೇಷವಾದ ಸ್ಛೂರ್ತಿ ನೀಡಿವೆ. ಪ್ರಪಂಚದ ಬೇರೆಯಾದ ದೇಶದ ಭಾಷಾ ಸಾಹಿತ್ಯದ ಮೇಲೂ ಯಾವ ಕೃತಿಯೂ ಭಾರತೀಯ ಸಾಹಿತ್ಯದ ಮೇಲೆ ಈ ಕೃತಿಗಳು ಬೀರಿದಷ್ಟು ಪ್ರಭಾವ ಬೀರಿಲ್ಲ. ಕವಿಗಳಿಗೂ ಸಂತರಿಗೂ ದಾರ್ಶನಿಕರಿಗೂ ಧರ್ಮಪ್ರಚಾರಕರಿಗೂ ಇವು ಆಧಾರ. ಜನಪದ ಸಾಹಿತ್ಯದಲ್ಲೂ ಇವು ಹಲವು ರೂಪಗಳಲ್ಲಿ ವಿಜೃಂಭಿಸಿವೆ. ಸಂಸ್ಕøತದಲ್ಲಿ ಮಾತ್ರವಲ್ಲದೆ ಆಧುನಿಕ ಭಾರತೀಯ ಭಾಷೆಗಳಲ್ಲಿ-ದ್ರಾವಿಡ ಭಾಷೆಗಳಲ್ಲೂ ಬಂದಿರುವ ರಾಮಾಯಣ ಭಾರತ ಕಾವ್ಯಗಳು ಅನೇಕ.

	ಕ್ರಿ. ಪೂ. 7ನೆಯ ಶತಮಾನದ ವೇಳೆಗೆ ಆರಂಭವಾದ ಮಗಧ ಸಾಮ್ರಾಜ್ಯದ ಮತ್ತು ಅನಂತರದ ಕಾಲದಲ್ಲಿ ಭಾರತ ಬಹುಮುಖವಾದ ಔನ್ನತ್ಯ ಸಾಧಿಸಿತು. ಇದು ಸಾಹಿತ್ಯದಲ್ಲೂ ವ್ಯಕ್ತಗೊಳ್ಳದೆ ಇರಲಿಲ್ಲ. ಬುದ್ಧ ಮಹಾವೀರರ ಪ್ರಭಾವದಿಂದ ಪ್ರಾಕೃತ ಭಾಷೆಯ ಸಾಹಿತ್ಯ ಬೆಳೆದಂತೆಯೇ ಸಂಸ್ಕøತದಲ್ಲೂ ಅನೇಕ ಕೃತಿಗಳ ಸೃಷ್ಟಿಯಾಯಿತು. ಕ್ರಿ. ಪೂ. 150-ಕ್ರಿ. ಶ. 320 ಅವಧಿಯಲ್ಲಿ ಭಾರತದ ಪಶ್ಚಿಮದಲ್ಲಿ ಸ್ಥಾಪನೆಗೊಂಡಿದ್ದ ಕುಷಾಣಸಾಮ್ರಾಜ್ಯ ಉತ್ತರ ಭಾರತವನ್ನೂ ಮಧ್ಯ ಏಷ್ಯವನ್ನೂ ಆವರಿಸಿಕೊಂಡಿತ್ತು. ಪಶ್ಚಿಮದ ಧರ್ಮ ಸಂಸ್ಕøತಿಗಳ ಪ್ರಭಾವ ಭಾರತೀಯ ಸಾಹಿತ್ಯದ ಮೇಲೆ ಬಿತ್ತು. ಬೌದ್ಧಧರ್ಮದಲ್ಲಿ ವಿದೇಶಿಯರು ಆಸಕ್ತಿ ಕಳೆದಿದ್ದರು. ಈ ಕಾಲದಲ್ಲಿ ಬಂದ ಕೃತಿ ಅಶ್ವಘೋಷನ ಬುದ್ಧಚರಿತ. ಕುಷಾಣ ಸಾಮ್ರಾಜ್ಯದ ಕ್ಷೀಣದೆಶೆಯೊಂದಿಗೆ ಭಾರತೀಯ ಪ್ರಭುತ್ವಗಳು ಮತ್ತೆ ತಲೆಯೆತ್ತಿದ್ದುವು. ಅನ್ಯಸಂಸ್ಕøತಿಗಳ ಪ್ರಭಾವ ಮುಂದುವರಿದೇ ಇತ್ತು. ಇತಿಹಾಸಪೂರ್ವಕಾಲದ ಆರ್ಯೀತರ ಪಂಗಡದವರಾದ ನಾಗರು ಪ್ರಬಲರಾದರು. ಆರ್ಯಸಂಸ್ಕøತಿಯಿಂದಲೂ ಅವರು ಪ್ರಭಾವಿತರಾದರು. ಭಾರತದ ಹಲವೆಡೆ ಆಳುತ್ತಿದ್ದ ಹಲವು ರಾಜವಂಶಗಳ ಚಕ್ರಾಧಿಪತ್ಯಗಳಲ್ಲಿ ಭಾರತೀಯ ಸಂಸ್ಕøತಿ ಬೇರುಬಿಟ್ಟಿತು. ಸಾಹಿತ್ಯ ಪರಂಪರೆ ಮುಂದುವರಿಯಿತು.

	ಮಗಧ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಯ ಕಾಲದಿಂದ 4ನೆಯ ಶತಮಾನದ ತನಕೆ ಅವಧಿಯಲ್ಲಿ ಆಧುನಿಕ ಭಾರತೀಯ ಭಾಷಾ ಸಾಹಿತ್ಯ ನಿರ್ಮಾಣಕ್ಕೆ ವ್ಯಾಪಕವಾದ ಅಸ್ತಿಭಾರ ಬಿತ್ತು. ಮನುಸ್ಮøತಿ ಒಂದು ಮುಖ್ಯ ಗ್ರಂಥ. ಯಾಜ್ಞವಲ್ಕ್ಯ ಇದನ್ನು ಪರಿಷ್ಕರಿಸಿದ. ಇದಲ್ಲದೆ ಇನ್ನೂ ಹಲವಾರು ಸ್ಮøತಿಗಳು ಬಂದುವು. ವಿವಿಧ ವರ್ಗಗಳ ಜನರನ್ನು ಆಕರ್ಷಿಸಿದ ಸಾಹಿತ್ಯ ಪ್ರಕಾರಗಳು ಜನಪದ ಕಥೆಗಳು ಮತ್ತು ಹಾಡುಗಳು. ಇವು ಪ್ರಾಕೃತ ಭಾಷೆಗಳವು. ನಾಟಕ ಹಾಗೂ ಕಾವ್ಯಗಳೂ ಬಂದುವು. ಋಗ್ವೇದದ ಸಂವಾದ ಗೀತೆಗಳಲ್ಲಿ ಬೀಜರೂಪದಲ್ಲಿದ್ದ ನಾಟಕ ಕಲೆ ಇತಿಂಹಾಸಕಾವ್ಯಗಳನ್ನು ಹಾಡಲಾಗುತ್ತಿದ್ದ ಕಾಲದಲ್ಲಿ ವಿಕಾಸಗೊಂಡಿತು. ಅಗಿನ ಕಾಲದ ಆತ್ಯಂತ ಪ್ರತಿಭಾನ್ವಿತ ನಾಟಕಕಾರ ಭಾಸ, ಇವನದೆಂದು ಲಭ್ಯವಿರುವ ಹದಿಮೂರು ನಾಟಕಗಳು ಸರಳತೆ, ಸತ್ತ್ವ. ಮಾಧುರ್ಯ, ತಂತ್ರ ನೈಪುಣ್ಯ, ವಸ್ತು ವೈವಿಧ್ಯಗಳಿಂದ ಕೂಡಿ ಶಕ್ತವೂ ಪ್ರಭಾವಶಾಲಿಯೂ ಆದವಾಗಿದೆ. ಶೂದ್ರಕನ ಮೃಚ್ಛಕಟಿಕ ಒಂದು ಸಾಮಾಜಿಕ ನಾಟಕ.ಇದರ ಕರ್ತೃ 3ನೆಯ ಅಥವಾ 4ನೆಯ ಶತಮಾನದಲ್ಲಿದ್ದವ.

	ಗದ್ಯಸಾಹಿತ್ಯವೂ ಸಂಸ್ಕøತದಲ್ಲಿ ವಿಪುಲವಾಗಿ ಬೆಳೆಯಿತು. ಪ್ರಾಚೀನ ಗದ್ಯ ರಚನೆಗಳು ಕೃಷ್ಣಯಜುರ್ವೇದದ ತೈತ್ತಿರಿಯ ಸಂಹಿತೆಯಲ್ಲೂ ಅಥರ್ವಣ ವೇದದಲ್ಲೂ ಇವೆ. ಬ್ರಾಹ್ಮಣಗಳು ಗದ್ಯ ಕೃತಿಗಳು. ಅರಣ್ಯಗಳಲ್ಲಿ ಗದ್ಯ ಹೆಚ್ಚು ಸೂತ್ರಗಳದು ಸಂಗ್ರಹ ಶಕ್ತಿಯಿಂದ ಕೂಡಿದ ಗದ್ಯ. ಅನಂತರ ಅಲಂಕಾರಯುಕ್ತ ಗದ್ಯಶೈಲಿ ಬೆಳೆಯಿತು. ವಿಷ್ಣುಶರ್ಮ ರಚಿಸಿದೆನೆನ್ನಲಾದ ಪಂಚತಂತ್ರ ಅಲ್ಲಲ್ಲಿ ಶ್ಲೋಕಗಳಿಂದ ಕೂಡಿದ ಗದ್ಯಕೃತಿ. ಇದರಲ್ಲಿ ನೀತಿಬೋಧಕ ಕಥೆಗಳಿವೆ. ಇದು ಕ್ರಿ.ಶ. 100-400ರ ಅವಧಿಗೆ ಸೇರಿದ್ದು. ಗುಣಾಢ್ಯನ ಬೃಹತ್ಕಥಾ ಇನ್ನೊಂದು ಕಥಾ ಗ್ರಂಥ. ಆಗ ಅನೇಕ ಶಾಸ್ತ್ರ ಕೃತಿಗಳೂ ರಚಿತವಾದುವು. ಅವುಗಳಲ್ಲಿ ವೈದ್ಯ ಗ್ರಂಥಗಳು ಪ್ರಮುಖ. ವಿಜ್ಞಾನದ ಅಧ್ಯಯನ ಭಾರತದಿಂದ ಇತರ ದೇಶಗಳಿಗೂ ವ್ಯಾಪಿಸಿತು. ಕೌಟಲ್ಯನ ಅರ್ಥಶಾಸ್ತ್ರ ಒಂದು ಮಹತ್ತ್ವದ ಕೃತಿ. ಇದು ರಾಜನೀತಿ ಕುರಿತ ಗ್ರಂಥ. ಚಂದ್ರಗುಪ್ತಮೌರ್ಯನ (ಕ್ರಿ.ಪೂ 4ನೆಯ ಶತಮಾನ) ಮಂತ್ರಿಯಾಗಿದ್ದ ಕೌಟಿಲ್ಯ ಇದನ್ನು ರಚಿಸಿದನೆಂಬುದು ಒಂದು ವಾದ. ಕ್ರಿ.ಶ. 3ನೆಯ ಶತಮಾನದಲ್ಲಿ ಇದು ರಚಿತವಾಯಿತೆಂಬುದು ಇನ್ನೊಂದು ವಾದ.

	ಅಭಿಜಾತ ಯುಗ: ಮುನ್ನೂರು ವರ್ಷಗಳ ಅಸ್ಥಿರತೆಯ ಅನಂಥರ 4ನೆಯ ಶತಮಾನದ ಅದಿಯಲ್ಲಿ ಉತ್ತರದಲ್ಲಿ ಗುಪ್ತ ಸಾಮ್ರಾಜ್ಯ ಪ್ರಬಲವಾಯಿತು. ದಕ್ಷಿಣ ಭಾರತದಲ್ಲಿ ಪಲ್ಲವ ಸಾಮ್ರಾಜ್ಯ ಪ್ರವರ್ಧಮಾನವಾಗಿತ್ತು. ಸಂಸ್ಕøತ ಮತ್ತೆ ಅಖಿಲ ಭಾರತದ ಮುಖ್ಯ ಸಾಹಿತ್ಯಮಾಧ್ಯಮವಾಗಿತ್ತು. 2ನೆಯ ಚಂದ್ರಗುಪ್ತ ವಿಕ್ರಮಾದಿತ್ಯನ ಸಮಕಾಲೀನನಾಗಿದ್ದ ಎನ್ನಲಾದ ಕಾಳಿದಾಸನ ಕೃತಿಗಳು ಅದ್ಭುತ ಸೌಂದರ್ಯದಿಂದ ಕೂಡಿ ಇಡೀ ಭಾರತದ ಸಾಹಿತ್ಯ ಮಾದರಿಗಳಾಗಿ ಬೆಳಗಿದುವು. ಮಹಾಭಾರತಕ್ಕೆ ಸಮಗ್ರ ರೂಪ ಬಂದದ್ದೂ ಆ ಕಾಲದಲ್ಲೇ. ವರಾಹಮಿಹಿರನ ಜ್ಯೋತಿಶ್ಯಾಸ್ತ್ರದ ವಿಕಾಸ, ವಾಯು ಮತ್ತು ಮತ್ಸ್ಯ ಪುರಾಣಗಳು ಇವು ಗುಪ್ತ ಸಾಮ್ರಾಜ್ಯದ ಕಾಲದ ದೊಡ್ಡ ಸಾಧನೆಗಳು. ಭಾರತಾದ್ಯಂತ ಮುಂದೆ ಭಕ್ತಿ ಚಳವಳಿಗಳಿಗೆ ಪ್ರೇರಣೆ ನೀಡಿದ ಶೈವ ನಾಯನ್ಮಾರರೂ ವೈಷ್ಣವ ಆಳ್ವಾರರೂ ಹೊಸದೊಂದು ಸಾಹಿತ್ಯ ಸಂಪ್ರದಾಯದ ಪ್ರವರ್ತಕರಾದರು. ಇವರು ಭಕ್ತಿ ಗೀತೆಗಳನ್ನು ಕಟ್ಟಿ ಹಾಡಿದರು. ಮಾಣಿಕ್ಯ ವಾಚಕರ್, ತಿರುಜ್ಞಾನಸಂಬಂಧರ್, ತಿರುನಾವುಕ್ಕರಶರ್, ಸುಂದರರ್ ಇವರು ಶೈವ ನಾಯನಾರರು. ಇವರ ಕಾಲ 700-900. ವೈಷ್ಣವ ಪ್ರಬಂಧಗಳನ್ನು ರಚಿಸಿದ ಆಳ್ವಾರರು ಹನ್ನೆರಡು ಮಂದಿ. ಪೊಯ್‍ಗೈಯಾರ್, ಪೂದಾತ್ತರ್, ಪೇಯಾರ್, ತಿರುಮೆಳಿಶೈ, ತಿರುಮಂಗೈ. ಕುಲಶೇಖರ, ಪೆರಿಯಾಳ್ವಾರ್, ಅಣ್ಡಾಳ್, ತೊಂಡರಡಿಪ್ಪೊಡಿ, ತಿರುಪ್ಟಾಣಾಳ್ವಾರ್, ನಮ್ಮಾಳ್ವಾರ್, ಮಧುರಕವಿ-ಇವರು 63-800 ಅವಧಿಯಲ್ಲಿದ್ದವರು.

	ವಾಯುವ್ಯದಿಂದ ಏರಿಬಂದ ಹೂಣರಿಂದಾಗಿ ಉತ್ತರ ಭಾರತದಲ್ಲಿ ತುಮುಲ ಉಂಟಾಗಿದ್ದರೂ ದಕ್ಷಿಣದಲ್ಲಿ ಭಾರತದ ಶಕ್ತಿ ಸಾಮಥ್ರ್ಯಗಳು ಆ ಕಾಲದಲ್ಲಿ ಪ್ರಕಟವಾದುವು. ದಕ್ಷಿಣದಲ್ಲಿ ಸಂಸ್ಕøತ ಸಾಹಿತ್ಯ ರಚನೆ ವಿಪುಲವಾಗಿ ನಡೆಯಿತು. ಇತ್ತ ಕನ್ನಡ ಸಾಹಿತ್ಯವೂ ವಿಕಾಸಗೊಳ್ಳುತ್ತಿತ್ತು. ಕನ್ನಡ ಶಾಸನಗಳೇ ಇದಕ್ಕೆ ಸಾಕ್ಷಿ. ಮಹಾರಾಷ್ಟ್ರೀ ಪ್ರಾಕೃತದ ಗಾಥೌಸಪ್ತಶತಿ, ಭಾರವಿ ರಚಿಸಿದ ಸಂಸ್ಕøತ ಕೃತಿ ಕಿರಾತಾರ್ಜುನಿಯ, ದಂಡಿಯ ಕಾವ್ಯಾದರ್ಶ, ಕುಲಶೇಖರರ ಮುಕುಂದ ಮಾಲಾ-ಇವು ಹೆಸರಿಸಬಹುದಾದ ಇನ್ನು ಕೆಲವು ಕೃತಿಗಳು.

	ಅಪಭ್ರಂಶ : ಎಂಟನೆಯ ಶತಮಾನ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಸಂಧಿಕಾಲ. ಅರಬರು ಭಾರತದಲ್ಲಿ ಅಧಿಕಾರ ಸ್ಥಾಪಿಸಲು ಯತ್ನುಸುದ್ದರು. ದಕ್ಷಿಣದಲ್ಲಿ ರಾಷ್ಟ್ರಕೂಟರೂ ಪೂರ್ವದಲ್ಲಿ ಪಾಲರೂ ಪಶ್ಚಿಮ ಉತ್ತರಗಳಲ್ಲಿ ಪ್ರತೀಹಾರರೂ ಪ್ರಬಲರಾಗಿದ್ದರು. ಒಂಬತ್ತನೆಯ ಶತಮಾನದ ವೇಳೆಗೆ ಉತ್ತರ ಪೂರ್ವ ಪಶ್ಷಿಮ ಭಾರತಗಳಲ್ಲಿ ಪಾಕೃತ ಭಾಷೆಗಳು ಆಪಭ್ರಂಶಗಳಾಗಿ ಮಾರ್ಪಾಡುಗೊಂಡು ಅಧುನಿಕ ಭಾರತೀಯ ಭಾಷೆಗಳ ಉಗಮ ವಿಕಾಸಗಳಿಗೆ ಅನುವುಂಟಾಗಿತ್ತು. ಸಂಸ್ಕøತದ ಪ್ರಾಮುಖ್ಯ ಬಹಳವಾಗಿ ಕಡಿಮೆಯಾಗಿದ್ದರೂ ಪಂಡಿತರ ವಿಚಾರ ವಿನಿಮಯದ ಮಾಧ್ಯಮವಾಗಿ ಅದು ಮುಂದುವರಿಯಿತು. ಆದರೆ ಜನಸಾಮಾನ್ಯದಿಂದ ದೂರವಾಗುತ್ತಿತ್ತು. ಗದ್ಯ ಪದ್ಯ ಮಿಶ್ರಿತವಾದ ಚಂಪೂ ಕಾವ್ಯಗಳು ಈ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದವು. ಸಾಹಿತ್ಯಕ್ಕೆ ಹಲವಾರು ಕಟ್ಟುಪಾಡುಗಳು ಬಂದದ್ದರಿಂದ ಕವಿಯ ಸ್ವಂತಿಕೆಯ ಪ್ರಕಟಣೆಗೆ ಅವಕಾಶಗಳು ಕಿರಿದಾದುವು. ಅದು ಕಾವ್ಯ ವಿಮರ್ಶಕರ, ಮೀಮಾಂಸಕಾರರ ಯುಗವೆನ್ನಬಹುದು.

	ಅಪಭ್ರಂಶದ ಮೊದಲನೆಯ ಉಲ್ಲೇಖ ಕಾಣಸಿಗುವುದು ಪತಂಜಲಿಯ ಮಹಾ ಭಾಷ್ಯದಲ್ಲಿ. ಪ್ರತಿಯೊಂದು ಶುದ್ಧ ಶಬ್ದಕ್ಕೂ ಹಲವು ಅಪಭ್ರಂಶಗಳಿವೆ ಎಂದು ಆತನ ಮತ. ಆತ ಪಾಲಿಪ್ರಾಕೃತಗಳು ಕೂಡ ಅಪಭ್ರಂಶ ಎನ್ನುತ್ತಾನೆ. ಭರತನ ನಾಟ್ಯಶಾಸ್ತ್ರದಲ್ಲಿ ಆ ಕಾಲದ ಭಾಷೆಗಳನ್ನು ಕುರಿತ ವಿವರಗಳಿವೆ. ಅಪಭ್ರಂಶವೆಂದರೆ ವಿಕೃತಿ ಎಂದಾದರೂ ಆ ಭಾಷಾಕವಿಗಳು ಅದನ್ನು ದೇಶೀ ಎಂದೇ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಅಪಭ್ರಂಶದ ಆತ್ಯಂತ ಪ್ರಾಚೀನ ಕಾವ್ಯಗಳು ದೋಹಾಗಳು (ದ್ವಿಪದಿ). ಉತ್ತರಭಾರತದ ಎಲ್ಲ ಆಧುನಿಕ ಭಾಷೆಗಳಲ್ಲೂ ದೊಹಾಗಳಿವೆ. ಮಧ್ಯಯುಗದ ಸಂತರು ದೋಹಾದಲ್ಲಿ ಕೃತಿರಚನೆ ಮಾಡಿ ಹಾಡಿದರು. 750-1000 ಅವಧಿಯಲ್ಲಿ ಪಶ್ಚಿಮ ಶೌರಸೇನಿ ಆಪಭ್ರಂಶ ಸಾಹಿತ್ಯದ ಭಾಷೆಯಾಗಿ, ಆಡುವ ಭಾಷೆಯಾಗಿ ಬೆಳೆಯಿತು. ಮರಾಠಿಯ ಉಗಮವಾದದ್ದು ಈ ಕಾಲದಲ್ಲಿ. ಚಾವುಂಡರಾಯನ 983ರ ಶ್ರವಣಬೆಳಗೊಳ ಶಾಸನದಲ್ಲಿ ಈ ಭಾಷೆಯ ಆತ್ಯಂತ ಪ್ರಾಚೀನ ಆಧಾರ ದೊರಕುತ್ತದೆ. ಪೂರ್ವ ಭಾರತದಲ್ಲಿ ಬಂಗಾಲಿ ಅಸ್ಸಾಮಿ ಮತ್ತು ಒರಿಯ ಭಾಷೆಗಳ ವಿಕಾಸಕ್ಕೆ ಪೂರ್ವಭಾರತದಲ್ಲಿ ಬಂಗಾಲಿ ಅಸ್ಸಾಮಿ ಮತ್ತು ಒರಿಯ ಭಾಷೆಗಳ ವಿಕಾಸಕ್ಕೆ ಪೂರ್ವಮಾಗಧಿ ಕಾರಣವಾಯಿತು. ಮಧ್ಯ ಮತ್ತು ಪಶ್ಚಿಮ ಮಗಧ ಸೀಮೆಗಳದು ಮೈಥಿಲಿ ಮತ್ತು ಮಗಹಿ ಹಾಗೂ ಭೋಜಪುರಿ ಇನ್ನೂ ಪಶ್ಚಿಮದ್ದು ಅರ್ಧಮಾಗಧಿ. ಬಂಗಾಲಿ ಭಾಷೆಯ ಅತ್ಯಂತ ಪ್ರಾಚೀನ ರೂಪಗಳನ್ನು ನೇಪಾಲದಲ್ಲಿ ಸಿಕ್ಕಿದ ಚರ್ಯಾಗೀತಗಳಲ್ಲಿ ಕಾಣಬಹುದು.

	ಜಯದೇವನ ಗೀತಗೋವಿಂದ ಒಂದು ಕುತೂಹಲಕಾರಿ ಕೃತಿ. ಇದು ಸಂಸ್ಕøತ ಕೃತಿಯಾದರೂ ಮೂಲತಃ ಅಪಭ್ರಂಶದಲ್ಲೋ ಹಳೆಯ ಬಂಗಾಲಿಯಂಥ ಯಾವುದಾದರೊಂದು ಭಾಷೆಯಲ್ಲೊ ರಚಿತವಾಗಿ ಅನಂತರ ಸಂಸ್ಕ್ರತಕ್ಕೆ ಅನುವಾದವಾಗಿರಬೇಕೆಂದು ಒಂದು ವಾದವಿದೆ. ಸಂತರೂ ಸಾಧುಗಳೂ ಅನಂತರ ಫಕೀರರೂ ದರ್ವೇಶಿಗಳೂ ಉತ್ತರ ಭಾರತದಲ್ಲಿ ಸಂಚರಿಸಿ ಅಲ್ಲಿಯ ವಿವಿಧ ಭಾಷಾ ಸಾಹಿತ್ಯಗಳ ಮೇಲೆ ಒಂದೇ ಬಗೆಯ ಧಾರ್ಮಿಕ ಸಾಂಸ್ಕøತಿಕ ಭಾಷಿಕ ಪ್ರಭಾವಗಳನ್ನು ಬೀರಿದರು. ಈ ಒಂದೊಂದು ಧಾರ್ಮಿಕ ಚಳವಳಿಯ ಅಲೆಯೂ ಹೆಚ್ಚು ಕಡಿಮೆ ಎಲ್ಲ ಉತ್ತರ ಭಾರತೀಯ ಭಾಷೆಗಳ ಮೇಲೂ ಏಕಕಾಲದಲ್ಲಿ ಉಂಟಾಗಿ ಒಂದೇ ಬಗೆಯ ಸಾಹಿತ್ಯ ಸೃಷ್ಟಿಗೆ ಕಾರಣವಾದ್ದು ಗಮನಿಸಬೇಕಾದ ಸಂಗತಿ.

	ಕನ್ನಡಕ್ಕೆ ಸಂಬಂಧಿಸಿದಂತೆ 850-1000 ಅವಧಿಯನ್ನು ಸ್ವರ್ಣಯುಗ ಎನ್ನಬಹುದು. ಇದು ಚಂಪೂ ಕೃತಿಗಳು ಮೈದಳೆದು ಬೆಳಗಿದ ಕಾಲ. ಮಹಾಕವಿ ಪಂಪ ಈ ಕಾಲದವ (941). ಉತ್ತರಭಾರತದ ಆದುನಿಕ ಭಾರತೀಯ ಭಾಷೆಗಳು ಇನ್ನೂ ವಿಕಾಸ ಹೊಂದದಿದ್ದಾಗಲೇ ದಕ್ಷಿಣದ ಕನ್ನಡದಲ್ಲಿ ಸಾಹಿತ್ಯ ವೈಭವ ಮೆರೆದಿತ್ತು. ತಮಿಳು ದಾಪುಗಾಲಿಡುತ್ತಿತ್ತು. ಆದರೆ ಈ ಹಿಂದಿನ ಕಾಲದ ಕವಿಗಳ ಗಾಯಕರ ಭಕ್ತರ ಭಾವತನ್ಮಯತೆ ತಮಿಳಿನ ಕವಿಗಳಲ್ಲಿರಲಿಲ್ಲ.

	ಆಧುನಿಕ ಅರ್ಯಭಾಷೆಗಳ ಉಗಮ: ಆಧುನಿಕಭಾಷೆಗಳು ಸುಮಾರು 11ನೆಯ ಶತಮಾನದ ವೇಳೆಗೆ ಕುಡಿಯೊಡೆಯತೊಡಗಿದ್ದುವು. ಮುಸ್ಲಿಮರು ಉತ್ತರಭಾರತದಲ್ಲಿ ಭದ್ರವಾಗಿ ನೆಲೆಗೊಂಡ ಮೇಲೆ ಈ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಯಾಗತೊಡಗಿತು. ಇತಿಹಾಸದ ಈ ಕಾಲದ ಘಟನೆಗಳು ಭಾರತೀಯ ಸಾಹಿತ್ಯದ ದೃಷ್ಟಿಯಿಂದ ಮಹತ್ತ್ವಪೂರ್ಣವಾದವು. ಮುಸ್ಲಿಮರ ಆಕ್ರಮಣದಿದ ಭಾರತೀಯರ ಆತ್ಮವಿಶ್ವಾಸಕ್ಕೆ ಮಹಾ? ಬಿತ್ತು. ಮುಸ್ಲಿಮ್ ಸಾಹಿತ್ಯ ಸಂಸ್ಕøತಿಗಳ ಪ್ರಭಾವವೂ ಇಲ್ಲಿಯ? ಮೇಲೆ ಆಯಿತು. ಪೃಥ್ವೀರಾಜನ ಜೀವನವನ್ನೂ ಆಧರಿಸಿದ ಪೃಥ್ವೀರಾಜ ರಾಸೋ ಪ್ರಾತಿನಿಧಿಕ ಕೃತಿ. ಇದೊಂದು ಸಾಹಸ ಕಥನ. ಒಂದು ತಲೆಮಾರಿನ ಆಸೆ ನಿರಾಸೆಗಳ, ಆದರ್ಶ ದುರಂತಗಳ, ಸಾಹಸ ಪರಾಕ್ರಮಗಳ ಕಥೆಯಿದು. ಇದನ್ನು ರಚಿಸಿದವ ಚಂದ್ ಬರದಾಈ ಎನ್ನಲಾಗಿದೆ. ಈ ಕಾಲದ ಸಾಹಿತ್ಯವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: 1 ಮುಸ್ಲಿಮರ ವಿರುದ್ಧ ಹೋರಾಡಿ ಸೋತ, ಅಲ್ಲಲ್ಲಿ ರಾಜ್ಯ ಕಟ್ಟಿದ ಹಿಂದೂ ರಾಜರ ಸಾಹಸ ಕಥೆ, 2 ಅರಬ್ಬೀ ಪಾರಸ ಲೇಖಕರಿಂದ ಪ್ರಭಾವಿತವಾದ ಸಾಹಿತ್ಯ, 3 ಇಸ್ಲಾಮ್ ಧರ್ಮ ಸಂಸ್ಕ್ರತಿಗಳ ಎದುರು ಹಿಂದೂ ಧರ್ಮ ಸಂಸ್ಕ್ರತಿಗಳನ್ನು ರಕ್ಷಿಸಲು ರಚಿಸಿದ ವ್ಯಾಖ್ಯಾನಗಳು, ಶಾಸ್ತ್ರಗ್ರಂಥಗಳು, 4 ದಕ್ಷಣದಲ್ಲಿ ಹುಟ್ಟಿ ಇಡೀ ಭಾರತವನ್ನೇ ವ್ಯಾಪಿಸಿದ ಭಕ್ತಿಯನ್ನು ಅಭಿವ್ಯಕ್ತಿಸುವ ಸಾಹಿತ್ಯ. ಇವುಗಳ ಜೊತೆಗೆ ಸಂಸ್ಕøತದಲ್ಲೂ ಕರ್ಮಮೀಮಾಂಸೆ, ಯೋಗ, ವೈಶೇಷಿಕ, ನ್ಯಾಯದರ್ಶನಗಳೂ ನಾಟಕಗಳೂ ರಚಿತವಾದುವು.

	1300ರ ಕೊನೆಯ ವೇಳೆಗೆ ಭಾರತದಲ್ಲಿ ಪ್ರಚಲಿತವಾಗಿದ್ದ ಭಾಷೆಗಳು ಬಂಗಾಲಿ, ಅಸ್ಸಾಮಿ, ಒರಿಯ, ಮೈಥಿಲಿ, ಮಗಹಿ. ಭೋಜ್‍ಪುರಿ, ಕೋಸಲಿ ಅಥವಾ ಅವಧಿ, ಬ್ರಜಭಾಷಾ, ಮರಾಠಿ, ಕೊಂಕಣಿ, ಪ್ರಾಚೀನ ಪಶ್ಚಿಮ ರಾಜಸ್ಥಾನಿ, ಸಿಂಧಿ, ಪಂಜಾಬಿ, ಕಾಶ್ಮೀರಿ. ಮುಂದೆ ಬಂಗಾಲಿ, ಅಸ್ಸಾಮಿ, ಒರಿಯಾ, ಮರಾಠಿ, ಗುಜರಾತಿ, ಸಿಂಧಿ, ಪಂಜಾಬಿ ಮತ್ತು ಹಿಂದಿ ಗಟ್ಟಿಯಾಗಿ ಉಳಿದು ಬೆಳೆದುವು. ಪೃಥ್ವಿರಾಜ ರಾಸೋ, ಖುಮೂ ರಾಸೋ ಮುಂತಾದ ರಜಪೂರಿತ ವೀರ ಕಥಾಕಾವ್ಯಗಳು ಸ್ಥೂಲವಾಗಿ ಈ ಕಾಲದವು. ಮುಸ್ಲಿಮರಿಗೆ ಪ್ರತಿಭಟನೆಯಾಗಿ ಬಂದ ಕೃತಿಗಳ ಜೊತೆಗೆ ಸೂಪಿ ತತ್ತ್ವಜ್ಞರ ಪ್ರಭಾವದಿಂದ ಬಂದ ಕೃತಿಗಳೂ ಸೃಷ್ಟಿಯಾದುವು. ಅಮೀರ್ ಖುಸ್ರು (1235-1325) ಈ ಕಾಲದ ದೊಡ್ಡ ಸೂಫಿ ತತ್ತ್ವಜ್ಞ ಹಾಗೂ ಕವಿ. ಪಾರಸಿ ಕವಿಯಲ್ಲದೆ ಈತ ಹಿಂದೀ ಕವಿ ಕೂಡ; ಹಳೆಯ ಪಶ್ಚಿಮ ಹಿಂದಿಯ ಪ್ರಥಮ ಲೇಖಕ. ಈತ ಪಾರಸಿ ಅರಬ್ಬಿ ಮತ್ತು ಹಿಂದಿ ನಿಘಂಟೊಂದನ್ನು (ಖಡೀ ಬೋಲೀಕೋಶ) ರಚಿಸಿದ ಎನ್ನಲಾಗಿದೆ. ಇವನ ಸಮಕಾಲೀನ ಕವಿ ಗೋಪಾಲನಾಯಕ ಧ್ರೂಪದಗಳನ್ನು ರಚಿಸಿದ್ದಾನೆ. ಕೋಸಲಿ ಅಥವಾ ಅವಧಿಯನ್ನು ಪೂರ್ವ ಹಿಂದಿ ಎನ್ನಲಾಗಿದೆ. ಈ ಭಾಷೆಯನ್ನಾಡುತ್ತಿದ್ದವರು ಕ್ರಮೇಣ ಖಡೀಬೋಲಿ ಅಥವಾ ಶಿಷ್ಟ ಹಿಂದಿಯನ್ನೇ ಬಳಸತೊಡಗಿದರು.

	ಶೌರಸೇನೀ ಪ್ರಾಕೃತದಿಂದ ವಿಕಾಸಗೊಂಡ ಭಾಷೆಗಳಲ್ಲಿ ಉರ್ದುವೂ ಒಂದು ಘಜ್ನಿ ಮಹಮೂದನ ದಂಡಯಾತ್ರೆಗಳ ಕಾಲದಲ್ಲಿ ಉರ್ದು ಉಗಮವಾಗಿದ್ದಿರಬಹುದು. ದೆಹಲಿಯ ಸುತ್ತಮುತ್ತ ಆಡುತ್ತಿದ್ದ ಬ್ರಿಜ್, ಹರ್ಯಾನಿ, ಪಂಜಾಬಿ, ರಾಜಸ್ಥಾನಿ ಮುಂತಾದವುಗಳೊಂದಿಗೆ ಭಾರತೀಯೇತರ ಧ್ವನ್ಯಾತ್ಮಕ ಅಂಶಗಳೂ ಶಬ್ದಗಳೂ ಸೇರಿ, ಹಿಂದೂಮುಸ್ಲಿಮರ ಭಾಷಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿ ಉರ್ದು ವಿಕಾಸಗೊಂಡಿತು. ಉರ್ದು ಎಂಬ ಪದದ ಮೊದಲಿನ ಪ್ರಯೋಗ ಆದದ್ದು 1150ರಲ್ಲಿ. ಆಗ ಇದು ಭಾಷೆಯನ್ನು ಸೂಚಿಸುತ್ತಿರಲಿಲ್ಲ. 'ದಂಡು ಎಂದು ಆಗ ಇದರ ಅರ್ಥ. ಭಾಷೆ ಎಂಬ ಅರ್ಥದಲ್ಲಿ 1752ರಲ್ಲಿ ಇದನ್ನು ಬಳಸಲಾಯಿತು. ಉರ್ದು ಎಂಬುದು ಮಿಶ್ರನುಡಿ ಅಥವಾ ಆಸ್ಥಾನದ ನಯಭಾಷೆ ಎಂದು ಗ್ರಿಲ್‍ಕ್ರೈಸ್ಟ್ ಹೇಳಿದ್ದಾನೆ. ಭಾಷೆ ಎಂಬ ಅರ್ಥದಲ್ಲಿ ಮೊದಲು ಬಳಸಿದವ ಇವನೇ ಎನ್ನಲಾಗಿದೆ. ಪಾರಸೀ ಅರಬ್ಬಿ ಭಾಷೆಗಳಿಂದ ಉಪಮೆಗಳೂ ವಸ್ತುಗಳೂ ಈ ಭಾಷೆಗೆ ಬಂದುವು. ಬಾಬಾ ಫರೀದ್, ನಾಗೌರಿ, ಅಲಿ ಕಲಂದರ್ ಮುಂತಾದವರು ಮತೀಯ ಸಾಮರಸ್ಯಕ್ಕಾಗಿ ಉರ್ದುವನ್ನು ಬಳಸಿಕೊಂಡರು. ಭಕ್ತಿಪ್ರತಿಪಾದಕರಾದ ಹಿಂದು ಸಂತರೂ ಇಸ್ಲಾಮಿನ ಏಕದೇವತಾ ಭಾವನೆಗಳಿಂದ ಪ್ರಭಾವಿತರಾಗಿ ಭಾಷಾ ಸಾಮರಸ್ಯದ ಪ್ರತೀಕವಾಗಿ ಉರ್ದುವಿಗೆ ಪ್ರೋತ್ಸಾಹ ನೀಡಿದರು.

	ರಾಜಸ್ಥಾನಿಯ ಮೊದಮೊದಲ ಸಾಹಿತ್ಯ ಕೃತಿಗಳು ಲಾವಣಿಗಳು, ಗೀತಗಳು ಮತ್ತು ದೋಹಾಗಳು. ಗುಜರಾತಿ 1300ರ ವೇಳೆಗೆ ಖಚಿತರೂಪ ತಳೆಯಿತು. ಶೌರ್ಯ ಸಾಹಸಕೃತಗಳ ವರ್ಣನೆ, ಇತಿಹಾಸದ ಘಟನೆಗಳ ನಿರೂಪಣೆ, ರಮ್ಯ ಕಥೆಗಳು ಗುಜರಾತಿಯ ಮೊದಮೊದಲ ಕೃತಿಗಳು. ರೇವಂತಗಿರಿರಾಸ (1394). ಸ್ಥೂಲಭದ್ರಫಾಗ (1334) ಮುಂತಾದ ಅನೇಕ ಕೃತಿಗಳು. ಬಂದುವು. ರಾಸಗಳು ನೃತ್ಯದಲ್ಲಿ ಬಳಸುವ ಹಾಡುಗಳು. 15, 16ನೆಯ ಶತಮಾನಗಳಲ್ಲಿ ಬದುಕಿದ್ದ ಕವಯಿತ್ರಿ ಮೀರಾಬಾಯಿ ಕೃಷ್ಣಭಕ್ತಿಯ ಪಾರಮ್ಯದಿಂದ ಹಾಡಿದ ಕೃತಿಯನ್ನು ಗುಜರಾತಿಗಳು ತಮ್ಮವೆಂದೂ ರಾಜಸ್ಥಾನಿಗಳು ತಮ್ಮವೆಂದೂ ಕರೆದುಕೊಳ್ಳುತ್ತಾರೆ.

	ಪಂಜಾಬಿಯ ರೂಪಗಳು ಎರಡು, ಪೂರ್ವ ಪಂಜಾಬಿ ಸಾಹಿತ್ಯ ಭಾಷೆ. ಇದು ಹಿಂದಿಯನ್ನು ಹೋಲುತ್ತದೆ. ಪಶ್ಚಿಮ ಪಂಜಾಬಿ ಅಥವಾ ಲಹನ್ ದಿ ಅಥವಾ ಹಿಂದ್‍ಕಿ ಸಾಹಿತ್ಯ ಮಾಧ್ಯಮವಾಗಲಿಲ್ಲ. ಸಿಂಧಿಯ ಅಪಭ್ರಂಶದ ಮಟ್ಟದಲ್ಲೇ ಅನೇಕ ಹಾಡು ಕಾವ್ಯಗಳು ರಚಿತವಾದುವು.

	ಅಸ್ಸಾಮಿ ಬಂಗಾಲಿಗಳ ಮೊದಮೊದಲ ರೂಪಗಳಲ್ಲಿ ಬಹಳಷ್ಟು ಸಾಮ್ಯ ಉಂಟು. ಮುಸ್ಲಿಮ್ ಆಕ್ರಮಣದಿಂದ ಬಂಗಾಲದ ಸಾಹಿತ್ಯದಮೇಲೆ ವಿಶೇಷವಾದ ಪರಿಣಾಮ ಉಂಟಾಯಿತು. ಸಂಸ್ಕøತದ ಮೋಹ ಕರಗಿ, ಕೆಳಗಿನ ವರ್ಗಗಳ ಜನರ ಸಂಸ್ಕøತಿ ಸಂಪ್ರದಾಯಗಳು ಪ್ರಬಲವಾದವು. ಬಂಗಾಲದ ಜನರಲ್ಲಿ ಪ್ರಚಲಿತವಿದ್ದ ಕಥೆಗಳು ಸಾಹಿತ್ಯಕ್ಕೆ ಬಂದುವು. ಅಸ್ಸಾಮಿಯ ಮೊದಮೊದಲ ಕೃತಿಗಳು ಸಂಸ್ಕøತ ಪುರಾಣಗಳಿಂದ ಪ್ರೇರಿತವಾದುವು. ಪ್ರಹ್ಲಾದ ಚರಿತೆ ಅಸ್ಸಾಮಿಯ ಮೊದಲ ಕೃತಿ. ಹೇಮಸರಸ್ವತಿ ಇದರ ಕರ್ತೃ. ಹರಿಹರ ವಿಪ್ರ ಎಂಬ ಕವಿ ಮಹಾಭಾರತವನ್ನು ಆಧರಿಸಿ ಕೃತಿ ರಚಿಸಿದ. ರುದ್ರಕುಂಡಲ ಇನ್ನೊಬ್ಬ. ಅಸ್ಸಾಮಿಯ ಮೊಲನೆಯ ದೊಡ್ಡ ಕವಿ ಮಾಧವಕುಂಡಲಿ. ಈತ ರಾಮಾಯಣವನ್ನೂ ಕೃಷ್ಣ ಚರಿತೆಯನ್ನೂ ಬರೆದ.

	ಒರಿಯದ ಪ್ರಾಚೀನ ಮಾದರಿಗಳು ಚರ್ಯಾಪದಗಳು ಎನ್ನಲಾಗಿದೆ. ಬಂಗಾಲಿಗಳು ಇವನ್ನು ತಮ್ಮ ಭಾಷೆಯ ಮೂಲಕೃತಿಗಳು ಎನ್ನುತ್ತಾರೆ. ಇವೆರಡೂ ಭಾಷೆಗಳ ನಂಟು ಎಂಥದೆಂಬುದಕ್ಕೆ ಇದು ನಿದರ್ಶನ. ಜಗನ್ನಾಥ ದೇವಾಲಯದ ತಾಳೆಯೋಲೆಯ ಇತಿ ವೃತ್ತಗಳು, ವತ್ಸದಾಸನ ಕಳಸ ಚೌತೀಸಾ ಇವು ಮೊದಲ ಕೃತಿಗಳು. ಸಾವಳಾದಾಸ ಮೊದಲನೆಯ ದೊಡ್ಡ ಕವಿ. ಮಹಾಭಾರತವನ್ನು ಈತ ಒರಿಯಾದಲ್ಲಿ ಬರೆದ. ಉತ್ಕಲವ್ಯಾಸನೆಂದೇ ಈತ ಪ್ರಸಿದ್ಧನಾಗಿದ್ದಾನೆ. ಮೈಥಿಲಿಯ ಆ ಕಾಲದ ಕವಿ ಉಮಾಪತಿಧರ. ಇವನ ಪಾರಿಜಾತ ಹರಣ ಎಂಬ ಸಂಸ್ಕøತ ನಾಟಕದಲ್ಲಿ ಮೈಥಿಲಿ ಭಾಷೆಯ ಗೀತಗಳಿವೆ. ಈ ಕಾಲದ ಇನ್ನೂ ಅನೇಕ ಕೃತಿಗಳಲ್ಲಿ ಆಗಿನ ಕಾಲದ ಮೈಥಿಲಿಯ ಪರಿಚಯ ಆಗುತ್ತದೆ.

	ದಕ್ಷಿಣ ಭಾರತದಲ್ಲಿ: ದಕ್ಷಿಣ ಭಾರತದಲ್ಲಿ ತಮಿಳು ಸಾಹಿತ್ಯದ ಬೆಳೆವಣಿಗೆ ಮುಂದುವರಿಯಿತು. ಶೈವ ವೈಷ್ಣವ ಸಾಹಿತ್ಯ ಕೃತಿಗಳ ರಚನೆಯಾಗುತ್ತಿತ್ತು. 13ನೆಯ ಶತಮಾನದ ಮೆಯ್ಕಂಡಾರರ ಶಿವಜ್ಞಾನ ಬೋಧಮ್, ಅರುಳ್-ನಂದಿ ಶಿವಾಚಾರ್ಯರ ಶಿವಜ್ಞಾನಸಿದ್ಧಿ ಇವನ್ನು ಹೆಸರಿಸಬಹುದು. ತೆಲುಗು ಸಾಹಿತ್ಯ ಸಮೃದ್ಧವಾಗಿ ಬೆಳೆದದ್ದು ಈ ಕಾಲದಲ್ಲಿ ಆದಿಕವಿ ನನ್ನಯ್ಯ ಮತ್ತು ತಿಕ್ಕನ, ಎಲಗು ತೆಲುಗು ಸಾಹಿತ್ಯವನ್ನು ಸಂಪದ್ಭರಿತವಾಗಿ ಮಾಡಿದರು. ಶೈವಕವಿಗಳು ಅನೇಕ ಕೃತಿಗಳನ್ನು ರಚಿಸಿದರು. ನನ್ನೆಜೋಡ, ಮಲ್ಲಿಕಾರ್ಜುನ ಪಂಡಿತಾರಾಧ್ಯ, ಪಾಲ್ಕುರಿಕೆ ಸೋಮನಾಥ ಮುಂತಾದವರು ಪ್ರಸಿದ್ಧ ಶೈವಕವಿಗಳು. ದೇಸಿ, ಮಾರ್ಗ ಎರಡೂ ರೀತಿಗಳಲ್ಲಿ ತೆಲುಗು ಸಾಹಿತ್ಯ ಬೆಳೆಯಿತು.

	ಮಲಯಾಳಮ್ ಈ ಕಾಲದಲ್ಲಿ ತಮಿಳು ಸಂಸ್ಕøತಗಳ ನಡುವೆ ತನ್ನತನವನ್ನು ಸ್ಥಾಪಿಸಿಕೊಳ್ಳಲು ಹೆಣಗತೊಡಗಿತ್ತು. ರಾಮಚರಿತಮ್ ಈ ಕಾಲದ ಒಂದು ಮಹತ್ತ್ವದ ಕೃತಿ. ಪಾಟ್ಟು ಶೈಲಿಯ ಈ ಕೃತಿಯ ಕರ್ತೃ ಚೀರಮನ್. ಮಣಿ ಪ್ರವಾಳಮ್ ಎಂಬ ಸಂಸ್ಕøತ ಮಲಯಾಳಮ್ ಮಿಶ್ರಿತ ಶೈಲಿಯ ಶ್ರೇಷ್ಠ ಕವಿ ತೋಲನ್. ಕೂಡಿಯಾಟ್ಟಮ್‍ಗೆ ಬಳಸಲಾದ ಹಲವು ಭಾಗಗಳು ಇವನವು ಎಂದು ನಂಬಿಕೆ. ಆ ಕಾಲದಲ್ಲಿ ಹಲವು ಚಂಪೂ ಕಾವ್ಯಗಳೂ ಮಲಯಾಳಮ್‍ನಲ್ಲಿ ಬಂದುವು. ಜೊತೆಗೆ ಜನಪದ ಸಾಹಿತ್ಯವೂ ಸಮೃದ್ಧಿಯಾಗಿ ಬೆಳೆಯಿತು.

	ಕನ್ನಡದಲ್ಲಿ ಈ ಕಾಲದಲ್ಲಿ ಒಂದು ಮಹಾಕ್ರಾಂತಿಯೇ ಜರಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ವೀರಶೈವ ವಚನಕಾರರು ಈ ಕ್ರಾಂತಿಗೆ ಕಾರಣರಾದರು. ವಚನ ಸಾಹಿತ್ಯ ಒಂದು ಹೊಸ ಪ್ರಯೋಗ. ಜೊತೆಗೆ ಸಾಮಾಜಿಕವಾಗಿಯೂ ಇವರು ಹೊಸಹಾದಿ ಹಾಕಿದರು. ಪಂಪನಿಂದ ಮೊದಲ್ಗೊಂಡು ಹರಿದು ಬಂದ ಸಾಹಿತ್ಯ ಪ್ರಕಾರ ಹೊಸ ಪ್ರಕಾರಗಳಿಗೆ ಎಡೆಕೊಟ್ಟಿತು. ಜನರ ಬಳಿಗೆ ಸಾಹಿತ್ಯ ಹೋಯಿತು. ಹರಿಹರ ಹೊಸ ಸಾಹಿತ್ಯ ಮಾರ್ಗದ ಪ್ರವರ್ತಕನಾದ. ಶಿವಪಾರಮ್ಯದ ಕಾಲವದು.

	ಹೀಗೆ ಇಡೀ ಭಾರತದಲ್ಲಿ ಹೆಚ್ಚುಕಡಿಮೆ ಒಂದೇ ಬಗೆಯ ಪ್ರಭಾವಗಳಿಗೆ ಒಳಗಾಗಿ ಭಾರತೀಯ ಸಾಹಿತ್ಯ ಹಲವು ಹೊಸ ಹಳೆಯ ಭಾಷೆಗಳಲ್ಲಿ ಮುಂದುವರಿದಿತ್ತು.

	ಮಧ್ಯಯುಗ: ದೆಹಲಿಯ ಸುಲ್ತಾನರ ಆಳ್ವಿಕೆ, ಮೊಗಲಾಯಿ ಪ್ರಭುತ್ವ, ದಕ್ಷಿಣದಲ್ಲಿ ವಿಜಯನಗರದ ವೈಭವ, ದಕ್ಷಿಣ ಪೂರ್ವಗಳಲ್ಲಿ ಮುಸ್ಲಿಮರ ಆಳ್ವಿಕೆಗಳ ಹಬ್ಬುಗೆ, ಗುರುನಾನಕರ ಸಿಖ್ ಧರ್ಮ ಸಂಸ್ಥಾಪನೆ, ಮರಾಠಿಗರ ಅಭ್ಯುದಯ, ಭಾರತಕ್ಕೆ ಐರೋಪ್ಯರ ಆಗಮನ, ಬ್ರಿಟಿಷ್ ಆಡಳಿತ ಇವೆಲ್ಲ ರಾಜಕೀಯ ಘಟನೆಗಳಿಗೆ ಭಾರತೀಯ ಅಲ್ಲೋಲ ಕಲ್ಲೋಲಗಳಿಂದಾಗಿ 1479ರಲ್ಲಿ ಕಾಶಿಯ ಬಳಿ ಜನಿಸಿ ಶುದ್ಧ ಅದ್ವೈತವನ್ನು ಬೋಧಿಸಿದ ವೈಷ್ಣವ ಸಂತ ವಲ್ಲಭಾಚಾರ್ಯ, ಬಂಗಾಲದ ನದಿಯಾದಲ್ಲಿ 1486ರಲ್ಲಿ ಹುಟ್ಟಿ ಪೂರ್ವ ಭಾರತದಲ್ಲೆಲ್ಲ ಕೃಷ್ಣ ಭಕ್ತಿಯನ್ನು ಪ್ರಚಾರ ಮಾಡಿದ ಚೈತನ್ಯ, 14-15ನೆಯ ಶತಮಾನಗಳ ಸಂಧಿಕಾಲದಲ್ಲಿ ಹುಟ್ಟಿ ಹಿಂದೂ ಮುಸ್ಲಿಮ್ ಸಾಮರಸ್ಯವನ್ನು ಬೋಧಿಸಿದ ಸಂತ ಕಬೀರ, ವಿಶ್ವಭ್ರಾತೃತ್ವವನ್ನು ಬೋಧಿಸಿದ ಗುರುನಾನಕ್ ಈ ನಾಲ್ವರಿಂದ ಈ ಕಾಲದ ಸಾಹಿತ್ಯ ಸೃಷ್ಟಿಗೆ ವಿಶೇಷ ಪ್ರೇರಣೆ ದೊರಕಿತು. ಚೈತನ್ಯ ಕಬೀರರಿಬ್ಬರೂ ಇಸ್ಲಾಮ್ ಸಂಸ್ಕøತಿಗೆ ವಿಭಿನ್ನ ರೀತಿಯ ಪ್ರತಿಕ್ರಿಯೆ ತೋರಿಸಿದರು. ಚೈತನ್ಯ ಮುಸ್ಲಿಮ್ ದೊರೆಯ ವಿರೋಧದಿಂದಾಗಿ ಬಂಗಾಲ ಬಿಟ್ಟು ಪುರಿಗೆ ಬಂದ. ಕಬೀರ ರಾಮ-ರಹೀಮರಲ್ಲಿ ಭೇದವಿಲ್ಲವೆಂದ, ನಾನಕ್ ಹಿಂದು-ಇಸ್ಲಾಮ್ ಸಂಸ್ಕøತಿಗಳ ಸಾತ್ತ್ವಿಕ ಶಕ್ತಿಗಳನ್ನು ಸಮನ್ವಯಗೊಳಿಸಿ ಹೊಸಧರ್ಮವನ್ನೇ ರೂಪಿಸಿದ. ನಾನಕ್ ವಾಣಿ ಆದಿಗ್ರಂಥದಲ್ಲಿ ಸಂಗ್ರಹವಾಗಿದೆ. ಚೈತನ್ಯದ ಪ್ರಭಾವಕ್ಕೆ ಒಳಗಾಗಿ ಒರಿಯದ ಜಗನ್ನಾಥದಾಸ ಒರಿಯ ಭಾಗವತವನ್ನು ಬರೆದ. 16-17ನೆಯ ಶತಮಾನಗಳ ಒರಿಯ ಸಾಹಿತ್ಯ ಇವನಿಂದ ಪ್ರಭಾವವಾಯಿತು. ಒರಿಯ ಸಾಹಿತ್ಯ ಸಂಸ್ಕøತಿ ಅಭಿಮಾನಗಳನ್ನು ಜನರಲ್ಲಿ ಉಳಿಸಿದ್ದ ಜಗನ್ನಾಥದಾಸನ ಭಾಗವತ. ಚೈತನ್ಯ ಪೂರ್ವಭಾರತದಲ್ಲಿ ಮೂರು ಶತಮಾನಗಳ ಕಾಲ ಸಾಹಿತ್ಯ ಸೃಷ್ಟಿಗೆ ಪ್ರೇರಕ ಶಕ್ತಿಯಾದ.

	ಈ ಸಂತರ ಶಿಷ್ಯರೂ ಮಿತ್ರರೂ ಪ್ರಾದೇಶಿಕ ಭಾಷೆಗಳನ್ನು ವಿಶೇಷವಾಗಿ ಬೆಳೆಸಿದರು. ಕಬೀರನಿಂದ ಹಿಂದಿ ಭಾಷೆ ಸಂಪದ್ಭರಿತವಾಯಿತು. ಇವನ ದೋಹಾಗಳು ಬಹಳ ಪ್ರಸಿದ್ಧವಾಗಿವೆ. ನಾಮದೇವನ ಶಿಷ್ಯರು ಮರಾಠಿ ಸಾಹಿತ್ಯವನ್ನು ಸೊಂಪಾಗಿ ಬೆಳೆಸಿದರು. ಉತ್ತರ ಭಾರತದ ರಾಧಾಕೃಷ್ಣ ಭಕ್ತಿಪಂಥದಿಂದ ಬ್ರಜ ಭಾಷೆ ಬೆಳೆಯಿತು. ನಾನಕನಿಂದ ಪಂಜಾಬಿಗೆ ಮರ್ಯಾದೆ ಪ್ರಾಪ್ತವಾಯಿತು. ಚೈತನ್ಯನಿಗೂ ಹಿಂದೆ ಬದುಕಿದ್ದ ಚಂಡೀದಾಸ ಬಂಗಾಲದ ವೈಷ್ಣವ ಕಾವ್ಯವನ್ನು ಬೆಳೆಸಿದ. ಚೈತನ್ಯನ ಪ್ರಭಾವದಿಂದ ಇದಕ್ಕೆ ಇನ್ನಷ್ಟು ಬೆಂಬಲ ದೊರಕಿತು. ಪೂರ್ವ ಭಾರತದಲ್ಲಿ ಮುಸ್ಲಿಮ್ ದೊರೆಗಳೂ ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ನೀಡಿದರು. ಬಂಗಾಲದ ಮುಸ್ಲಿಮ್ ದೊರೆಗಳೂ ಬಂಗಾಲಿ ಬಲ್ಲವರಾಗಿದ್ದರು. ಮಹಾಭಾರತ ಭಾಗವತಗಳು ಸಂಸ್ಕøತದಿಂದ ಬಂಗಾಲಿಗೆ ಅನುವಾದವಾದುವು. ಹಿಂದೂ ಮುಸ್ಲಿಮ್ ಸಂಸ್ಕøತಿಗಳು ಪರಸ್ಪರ ಬೆರೆಯದೆ ಹೋದರೂ ಒಂದರ ಮೇಲೊಂದು ಪ್ರಭಾವ ಬೀರಿದುವು. ದೆಹಲಿಯ ಸುಲ್ತಾನರ ಅಮೀರರ, ಮೊಗಲರ ಕಾಲದಲ್ಲಿ ಪರ್ಷಿಯನ್ ಭಾಷೆಗೆ ಪ್ರೋತ್ಸಾಹ ದೊರಕಿತು. ಹಿಂದುಗಳು ಕಡೆಗಣಿಸಿದ್ದ ಇತಿಹಾಸ ರಚನೆಗೆ ಇವರು ಗಮನ ನೀಡಿದ್ದು ಉಲ್ಲೇಖಾರ್ಹ, ಸರಳ ಸುಂದರ ಗದ್ಯದಲ್ಲಿ ಇವರು ಇತಿಹಾಸ ಗ್ರಂಥಗಳನ್ನು ಬರೆಯಿಸಿದರು. ದೆಹಲಿ ಸುಲ್ತಾನನ ಕಾಲದ ಪ್ರಸಿದ್ಧ ಇತಿಹಾಸ ಲೇಖಕ ಜಿಯಾ-ಉದ್-ದಿನ ಬರ್ನಿ ಬಾಬರ್ ಆತ್ಮಕಥೆ ರಚಿಸಿದ. ಅಕ್ಬರನ ಕಾಲದಲ್ಲಿ ಪರ್ಷಿಯನ್ ಭಾಷೆಯಲ್ಲಿ ಹಲವು ಇತಿಹಾಸ ಕೃತಿಗಳೂ ಭಾಷಾಂತರಗಳೂ ರಚಿತವಾದುವು. 16-17ನೆಯ ಶತಮಾನಗಳು ಹಿಂದುಸ್ಥಾನಿ ಸಾಹಿತ್ಯದ ಸ್ವರ್ಣಯುಗ. ಅಕ್ಬರನ ಆಸ್ಥಾನದಲ್ಲಿದ್ದ ಅಬ್ದುಲ್ ರಹೀಮವ ಖಾಸ್-ಇ-ಖಾನಾನನ ದೋಹಾಗಳು ಪ್ರಸಿದ್ಧ. ನರಹರಿ ಹರಿನಾಥ್ ಮತ್ತು ಗಂಜ್ ಅಕ್ಬರನ ಆಸ್ಥಾನದ ಇತರ ಕವಿಗಳು, ಷಹಜಹಾನನ ಮಗ ದಾರಾಶುಕೋಹ್ ಭಾರತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬನಾಗಿದ್ದ. ಇವನು ಉಪನಿಷತ್ತುಗಳು, ಭಗವದ್ಗೀತೆ ಯೋಗಾವಾಶಿಷ್ಠ, ರಾಮಾಯಣಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ. ಸೂಫಿ ದರ್ಶನದಲ್ಲಿ ನಂಬಿಕೆ ಇಟ್ಟಿದ್ದವ. ಮೊಗಲರ ಕಾಲದಲ್ಲಿ ರಾಮಭಕ್ತಿ ಕೃಷ್ಣಭಕ್ತಿಗಳು ವಿಕಾಸ ಹೊಂದಿದವು. ಹೊಸ ಕೃತಿಗಳು ಚಿಮ್ಮಿದವು. ಸೂರ್‍ದಾಸ್ ತುಲಸೀದಾಸರು ಹಿಂದೀ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದರು. ತುಲಸೀದಾಸನ ರಾಮಚರಿತ ಮಾನಸ ತುಂಬ ಜನಪ್ರಿಯ ಕೃತಿ. ಉರ್ದು ಸಾಹಿತ್ಯ ದಕ್ಷಿಣ ಭಾರತದಲ್ಲಿ ಬಹಮನಿ ಸುಲ್ತಾನರ ಆಡಳಿತದ ಕಾಲದಲ್ಲಿ ವಿಶೇಷವಾಗಿ ಪ್ರವರ್ಧಮಾನಕ್ಕೆ ಬಂದಿತ್ತು. ಬಂಗಾಲದ ಮಂಗಲಕಾವ್ಯ ವೈಶಿಷ್ಟ್ಯಪೂರ್ಣವಾದ್ದು, ಅಸ್ಸಾಮಿನಲ್ಲಿ ವೈಷ್ಣವ ಪಂಥದ ಕವಿಗಳ ಸಾಹಿತ್ಯದ್ದೇ ಒಂದು ಬಣ್ಣ.

	ದಕ್ಷಿಣದಲ್ಲಿ ತೆಲುಗುಸಾಹಿತ್ಯ ವಿಜಯನಗರದ ದೊರೆಗಳ ಪ್ರೋತ್ಸಾಹದಿಂದ ಹೊರವಾಗಿ ಬೆಳೆಯಿತು. ಶ್ರೀನಾಥ ಶ್ರೀಮಂತ ಕವಿ. ಪೋತನ ಸಹಜ ಕವಿ. ಇವರಿಬ್ಬರೂ ತೆಲುಗು ಸಾಹಿತ್ಯದ ಸೂರ್ಯಚಂದ್ರರೆನಿಸಿದ್ದಾರೆ. ಪೋತನ ಭಕ್ತಿಪ್ರಧಾನ ಕವಿ. ಮೃದು ಮಧುರ ಶೈಲಿ ಈತನದು. ವಿಜಯನಗರದ ಕೃಷ್ಣದೇವರಾಯ ತೆಲುಗಿಗೂ ಪ್ರೋತ್ಸಾಹ ನೀಡಿದ. ಪ್ರಬಂಧವೆಂಬ ಮಹಾ ಕಾವ್ಯಪ್ರಕಾರ ಇವನಿಂದ ಬೆಳೆಯಿತು. ಇದು ಕಾವ್ಯಯುಗ ಕೂಡ. ತೆನಾಲಿ ರಾಮಕೃಷ್ಣನ ಹೆಸರಿನ ಸುತ್ತ ಅನೇಕ ಜನಪ್ರಿಯ ಕತೆಗಳು ಬೆಳೆದಿವೆ. ತಂಜಾವೂರಿನಲ್ಲಿ ತೆಲುಗು ಯಕ್ಷಗಾನ ಬೆಳೆಯಿತು. ಮಲಯಾಳಮ್ ಸಾಹಿತ್ಯ ಕ್ಷೇತ್ರದಲ್ಲೂ ಅನೇಕ ಚಟುವಟಿಕೆಗಳು ಬೆಳೆದುವು. ಕಣ್ಣಶ್ಯನ್ ಪಾಟ್ಟುಗಳ್ ಸಂದೇಶ ಕಾವ್ಯ, ಮಣಿಪ್ರವಾಳ ಶೈಲಿಯ ಚಂಪೂಕಾವ್ಯ ಇವು ಪ್ರಮುಖ. ಈ ಕಾಲದಲ್ಲಿ ರಚಿತವಾದ ಕೃಷ್ಣಗಾಥ ಒಂದು ಹೊಸ ಯುಗವನ್ನೇ ಅರಂಭಿಸಿತು. ಎಚುತ್ತಚ್ಚನ್ ಮುಲಯಾಳಮ್ ಭಾಷೆಯನ್ನು ತನ್ನ ಕೃತಿಗಳಿಂದ ಮೇಲೆತ್ತಿದ್ದ. ರಾಮಾಯಣ, ಭಾರತ ಕಿಳಿಪಾಟ್ಟುಗಳನ್ನು ರಚಿಸಿದ ಎಚತ್ತಚ್ಚನ್ ಹೊಸ ಸಂಪ್ರದಾಯವನ್ನೇ ಹುಟ್ಟುಹಾಕಿದ. ಮತ್ತೆ ಮಲಯಾಳಮ್‍ನಲ್ಲೂ ಇಡೀ ಭಾರತದಲ್ಲಿ ಕಂಡುಬಂದ ಪ್ರಭಾವನೇ ಬೆಳೆಯಿತೆನ್ನಬೇಕು. ಅದು ರಾಮಾಯಣ ಭಾರತಗಳ, ಪುರಾಣಗಳ ಭಕ್ತಿಯ ಪ್ರಭಾವ. ತಮಿಳಿನಲ್ಲಿ ಇ ಕಾಲದಲ್ಲಿ ಹಲವು ವೇದಾಂಥ ಗ್ರಂಥಗಳೂ ವ್ಯಾಖ್ಯಾನಗಳೂ ಪುರಾಣಗಳೂ ಪ್ರಬಂಧಗಳೂ ಸೃಷ್ಟಿಯಾದುವು. ಕನ್ನಡದಲ್ಲಿ ವೀರಶೈವ ಸುಧಾರಕರ ಕತೆಗಲೂ ಧಾರ್ಮಿಕ ಸಿದ್ದಾಂತಗಳೂ ಕಾವ್ಯದಲ್ಲಿ ರಚಿತವಾದುವು. ದಾಸಸಾಹಿತ್ಯ ವಿಪುರವಾಗಿ ಸೃಷ್ಟಿಯಾಯಿತು. ಪುರಂದರದಾಸ ತೀರಿಕೊಂಡಾಗ (1564) ಉತ್ತರಭಾರತದ ಸಂತಕವಿ ತುಲಸೀದಾಸ ನಡುಹರೆಯದಲ್ಲಿದ್ದ. ಕನ್ನಡದಲ್ಲಿ ಚಂಪೂಕಾವ್ಯ, ಷಟ್ಟದಿ, ರಗಳೆಗಳಲ್ಲದೆ ತ್ರಿಪದಿ ಸಾಂಗತ್ಯ ಮುಂತಾದವೂ ಬೆಳೆದವು. ತೆಲುಗಿನಲ್ಲಿ ವೇಮನದ ಪದ್ಯಗಳಂತೆ ಕನ್ನಡದಲ್ಲಿ ಸರ್ವಜ್ಞನ ತ್ರಿಪದಿಗಳು ಮೆರೆದುವು. ಕುಮಾರವ್ಯಾಸ ಲಕ್ಷ್ಮೀಶರು ಭಾರತ ಕಥೆ ಬರೆದರು. ಬಂಗಾಲಿ ಕಾವ್ಯದ ಮೇಲೆ ತನ್ನ ಪ್ರಭಾವದ ಮುದ್ರೆ ಒತ್ತಿದ ಚೈತನ್ಯ 1510ರಲ್ಲಿ ದಕ್ಷಿಣ ಭಾರತಕ್ಕೆ ಬಂದಿದ್ದನೆಂದು ಹೇಳಲಾಗಿದೆ. ಹೀಗೆ ಇಡೀ ಭಾರತದ ಸಾಹಿತ್ಯ ಒಂದೇ ಬಗೆಯ ಪ್ರಭಾವಗಳಿಗೆ ಒಳಗಾಗಿತ್ತು. ವಿವಿಧ ಭಾಷಾ ಸಾಹಿತ್ಯ ಸಂಸ್ಕøತಿಗಳು ಪರಸ್ಪರವಾಗಿಯೂ ಪ್ರಭಾವ ಬೀರಿದುವು. ಸಂಸ್ಕøತ ಸಾಹಿತ್ಯಕ್ಕೂ ವಿಶೇಷ ಪ್ರೋತ್ಸಾಹ ದೊರಕಿತು. ಹಿಂದೂ ಮುಸ್ಲಿಮ್ ದೊರೆಗಳಿಬ್ಬರೂ ಇದನ್ನು ಪ್ರೋತ್ಸಾಹಿಸಿದರು. ಭಾರತದ ಅನೇಕ ಮುಸ್ಲಿಮ್ ವಿದ್ವಾಂಸರು ಸಂಸ್ಕøತವನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರೆಂಬುದು ಗಮನಿಸಬೇಕಾದ ಸಂಗತಿ.

	ಮಧ್ಯಯುಗದ ಪ್ರಥಮಾರ್ಧದ ಸಾಹಿತ್ಯದ ಪ್ರಧಾನ ಲಕ್ಷಣಗಳು ಇವು: 1 ಇಡೀ ಭಾರತದಲ್ಲಿ ಭಕ್ತಿ ಚಳವಳಿಯ ಹಬ್ಬುಗೆಯ ಫಲವಾಗಿ ಸುಂದರ ಕಾವ್ಯ ಕೃತಿಗಳ ರಚನೆ; 2 ಪ್ರಾದೇಶಿಕ ಭಾಷೆಗಳ ಬೆಳೆವಣಿಗೆ ಜನಸಾಮಾನ್ಯರ ಅಭಿವ್ಯಕ್ತ ಮಾಧ್ಯಮಗಳಾದ ಈ ಭಾಷೆಗಳಲ್ಲಿ ವಿಪುಲ ಸಾಹಿತ್ಯ ಸೃಷ್ಟಿ; 3 ಹಿಂದು-ಮುಸ್ಲಿಮ್ ಸಂಸ್ಕøತಿಗಳು ಬೆರೆಯದಿದ್ದರೂ ಪರಸ್ಪರ ಪ್ರಭಾವ; ಮುಸ್ಲಿಮ್ ದೊರೆಗಳ ಪ್ರೋತ್ಸಾಹದಿಂದಾಗಿ ಸಂಸ್ಕøತದಿಂದ ಪ್ರಾದೇಶಿಕ ಭಾಷೆಗಳಿಗೆ ಕೃತಿಗಳ ಅನುವಾದ; 4 ದಕ್ಷಿಣಭಾರತದಲ್ಲಿ ವಿಜಯನಗರದ ದೊರೆಗಳಿಂದ ಸಾಹಿತ್ಯಕ್ಕೆ ಪ್ರೋತ್ಸಾಹ; ಜನಗಳ ಬಳಿಗೆ ಸಾಹಿತ್ಯವನ್ನು ಕೊಂಡೊಯ್ದ ಅನೇಕ ಕವಿಗಳಿಂದ ಉತ್ತಮ ಕಾವ್ಯಗಳ ರಚನೆ; ಹೊಸ ಸಾಹಿತ್ಯ ಪ್ರಕಾರಗಳ ಸೃಷ್ಟಿ. ಹೀಗೆ ಎಲ್ಲ ಭಾಷಾ ಸಾಹಿತ್ಯಗಳಿಗೂ ಒಂದೇ ಬಗೆಯ ಮೂಲಪ್ರೇರಣೆಗಳಿದ್ದು ಅವೆಲ್ಲ ಕೆಲವು ಸಮಾನ ಲಕ್ಷಣಗಳಿಂದ ಕೂಡಿದ್ದು ವೈಶಿಷ್ಟ್ಯಪೂರ್ಣವಾಗಿ ಬೆಳೆದುವು.

	ಮೊಗಲ್ ಸಾಮ್ರಾಜ್ಯದ ಅವನತಿಯೊಂದಿಗೆ ಭಾರತೀಯ ಸಾಹಿತ್ಯದ ಉತ್ತಮಾಂಶಗಳೂ ಕಡಿಮೆಯಾಗತೊಡಗಿದುವು. ಇದಕ್ಕೆ ರಾಜಕೀಯ ಅಸ್ಥಿರತೆ ಮುಖ್ಯ ಕಾರಣ. ಉತ್ತರ ದಕ್ಷಿಣಗಳ ಎಲ್ಲ ಭಾಷೆಗಳ ಸಾಹಿತ್ಯದಲ್ಲೂ ಶಿಥಿಲತೆಯನ್ನೆ ಕಾಣಬಹುದು. 19ನೆಯ ಶತಮಾನದಲ್ಲಿ 1857ರ ಬಂಡಾಯದೊಂದಿಗೆ ಆಧುನಿಕ ಯುಗ ಆರಂಭ-ಪಾಶ್ಚಾತ್ಯರೊಂದಿಗೆ ಸಂಪರ್ಕ ಏರ್ಪಟ್ಟ ಕಾಲದಿಂದಲ್ಲ, ಪಾಶ್ಚಾತ್ಯ ನಾಗರಿಕತೆಯೊಂದಿಗೆ ಭಾರತೀಯ ನಾಗರಿಕತೆಯ ಘರ್ಷಣೆ ಉಂಟಾದಾಗ, ದೇಶದಲ್ಲಿ ರಾಜಕೀಯ ಜಾಗೃತಿ ಉಂಟಾದಾಗ, ದಕ್ಷಿಣದಲ್ಲಿ ಮತ್ತು ಬಂಗಾಲದಲ್ಲಿ ಪಾಶ್ಚಾತ್ಯ ನಾಗರಿಕತೆಯ ಪ್ರಥಮತಃ ಪ್ರಭಾವ ಬಿತ್ತು. ಅನಂತರ ಇತರ ಭಾಗಗಲಿಗೆ ಅದು ವ್ಯಾಪಿಸಿತು. ಭಾರತೀಯ ಸಾಹಿತ್ಯದ ಆಧುನಿಕ ಯುಗವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: 1 ಪುನರುಜ್ಜೀವನ 2 ರಾಷ್ಟ್ರೀಯ ಸಾಂಸ್ಕøತಿಕ ಜಾಗೃತಿ, 3 ರಮ್ಯಕಾವ್ಯದ ಪ್ರಚಾರ, 4 ಮಾಕ್ರ್ಸ್ ತತ್ತ್ವದ ಪ್ರಭಾವ, ಸಾಮಾಜಿಕ ಕ್ರಾಂತಿ, 5 ಸ್ವಾತಂತ್ರ್ಯ ಮತ್ತು ಅನಂತರ.

	ಆಧುನಿಕ ಯುಗ: ತಮಿಳಿನಲ್ಲಿ ಪುನರುಜ್ಜೀವನದ ಮುಂದಾಳುಗಳು ರಾಮ ಲಿಂಗಮ್ ಮತ್ತು ಸುಬ್ರಹ್ಮಣ್ಯ ಭಾರತಿ; ತೆಲುಗಿನಲ್ಲಿ ವೀರೇಶಲಿಂಗಮ್. ಕನ್ನಡದಲ್ಲೂ 19ನೆಯ ಶತಮಾನದ ಕೊನೆಯ ವೇಳೆಗೆ ಪುನರುಜ್ಜೀವನವಾಯಿತು. ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆ ಇಂಗ್ಲಿಷ್ ಮತ್ತು ಇತರ ಭಾಷೆಗಳಿಂದ ಅನುವಾದ, ಬಿಎಂಶ್ರೀ, ಗೋವಿಂದ ಪೈ, ಮಾಸ್ತಿ, ಬೇಂದ್ರೆ, ಕುವೆಂಪು ಮುಂತಾದವರ ಕೃತಿಗಳಿಂದಲೂ ವಿಚಾರಗಳಿಂದಲೂ ಆಧುನಿಕ ಯುಗದ ಆರಂಭವಾಯಿತು. ಮಲಯಾಳಮ್‍ನಲ್ಲಿ ಪುನರುಜ್ಜೀವನದ ಪ್ರವರ್ತಕರು ಕೇರಳವರ್ಮ, ವೆನ್ಮಾಣಿ, ರಾಜವರ್ಮ, ವಲ್ಲತೋಳ್: ಮರಾಠಿಯಲ್ಲಿ ರಾನಡೆ, ಗೋಖಲೆ ಹೊಸಯುಗದ ಉದಯವನ್ನು ಸಾರಿದರು. ಬಂಗಾಲಿಯಲ್ಲಿ ಅನೇಕ ಸಾಮಾಜಿಕ ಸಾಂಸ್ಕøತಿಕ ಆಂದೋಲನಗಳಾದುವು. ರಾಜರಾಮ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ, ಮಹರ್ಷಿ ದೇವೇಂದ್ರನಾಥ ಠಾಕೂರ್, ಈಶ್ವರಚಂದ್ರಗುಪ್ತ, ಮಧುಸೂದನದತ್ತ, ಬಂಕಿಮ್‍ಚಂದ್ರ, ಶರತ್‍ಚಂದ್ರ, ರವೀಂದ್ರನಾಥ ಠಾಕೂರ್; ಅಸ್ಸಾಮಿಯಲ್ಲಿ ಪುಕನ್, ಹೇಮಚಂದ್ರ ಬರುವ; ಉರ್ದುವಿನಲ್ಲಿ ಇಕ್ಬಾಲ್; ಹಿಂದಿಯಲ್ಲಿ ಮೈಥಿಲೀ ಶರಣಗುಪ್ತ, ಮುನ್ಷಿಪ್ರೇಮ್ ಚಂದ್ ಹೀಗೆ ಹೆಸರುಗಳನ್ನು ಹೇಳಬಹುದು. ಪಾಶ್ಚಾತ್ಯ ಸಾಹಿತ್ಯಗಳಿಂದ ಪ್ರಭಾವಿತವಾಗಿ ಭಾರತದ ಎಲ್ಲ ಭಾಷೆಗಳಲ್ಲೂ ರಾಷ್ಟ್ರಾಭಿಮಾನದ ಜೊತೆಗೆ ರಮ್ಯಕಾವವೂ ಬೆಳೆಯಿತು. ಮಾಕ್ರ್ಸ್, ಪ್ರಾಯ್ಡ್ ಇವರೂ ಸಾಹಿತ್ಯದ ಮೇಲೆ ಪ್ರಭಾವ ಬೀರಿದರು. ಪ್ರಗತಿಶೀಲ ಸಾಹಿತ್ಯ, ನವ್ಯಕಾವ್ಯ, ಪ್ರತಿಭಟನೆಯ ಸಾಹಿತ್ಯ, ಬಂಡಾಯ ಸಾಹಿತ್ಯ ಈ ಎಲ್ಲ ಪ್ರವೃತ್ತಿಗಳೂ ಕಂಡುಬಂದಿವೆ. ಸಾಹಿತ್ಯದ ಹೊಸ ಹೊಸ ಪ್ರಕಾರಗಳೂ ಬಂದಿವೆ. ಕಾದಂಬರಿ, ಪ್ರಬಂಧ, ಸಣ್ಣಕತೆ ಇವು ಕೆಲವು ಹೊಸ ಪ್ರಕಾರಗಳು ಬಂದಿವೆ. 

	ಹೀಗೆ ಭಾರತೀಯ ಸಾಹಿತ್ಯದಲ್ಲಿ ಹಳೆಯ ಪರಂಪರೆಯ ಅಸ್ತಿವಾರದ ಮೇಲೆ ಹೊಸ ಬಗೆಯ ನಿರ್ಮಾಣಗಳಾಗುತ್ತಿವೆ.			
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ